"ಹೇ ಗೊಂದಳಿಗ್ಯಾ ಸುಮ್ಮನೆ ಬೀಳು.ಅದೆಲ್ಲ ನಿನಗ್ಯಾಕೆ ಬೇಕು. ನಿನಗೂ ರೊಕ್ಕ ಕೊಡವಾ ನಾನ, ಅವರಿಗೂ ರೊಕ್ಕ ಕೊಡವ ನಾನ. ಇಲ್ಲದ ಕಾರಬಾರ ಮಾಡ್ಬೇಡ ಸುಮ್ಮನ ಬೀಳು " ಅಂದ ಗೋಪಾಲ. ಅಷ್ಟು ಅಂದಿದ್ದೆ ತಡ ಗೊಂದಲಿಗ ಮಿಸಗ್ಯಾಡಲಾರದಂಗ ಮಲಗಿಕೊಂಡು ಬಿಟ್ಟ. ಅಲ್ಲಿಂದ ನಾನು ಹುಡುಕಾಡಿ ಪದ ಹಿಡದಿನ್ರಿ.
“ಕಲ್ಪಿತ ನಡೆಯುವ ಕತಿಯ ಕೇಳಿರಿ
ಕುಡಿಯಲಿಲ್ಲ ಭಕ್ತಿ ಬ್ರಹ್ಮಾಂಡ ಎಂಬುದು
ಉರಿಯತೈತಿ ಹೆಚ್ಚಾತು ಉಷ್ಣತೆ
ಗಟ್ಟಿಯಾದ ಗಂಡು ಬೀಜ ಕರಗಿ ನೀರಾದಿತು
ಹುಚ್ಚಾಟ ನಡೆದೈತಿ, ಸೊನ್ನೆಯ ಮೇಲೆ ತಿಳಿಬೇಕಪ್ಪ
ಮಣ್ಣು ಹೋರುವ ಕತ್ತಿ ನಡವಾಗಿದೆ ನಡ ಬಾಗಿದ ಮುದಿ ಹದನದ
ಬಾಳ ಮೂಗಿನಾಗ ಮೂಗುತಿ
ದೇಶದೊಳಗ ದಬ್ಬಾಳಿಕೆ ನಡೆದಿತ್ತು ಡುಬ್ಬ ಹ್ವಾದೀತು ಕೆತ್ತಿ “
ಈ ಹಾಡಿನಲ್ಲಿ ಕೊನೆಗೆ ಬರೆ "ತಿ " ಅಕ್ಷರಗಳೇ ಬರ್ತವೆ.
ಈ ಪದದಾಗ ನಾನು "ಡುಬ್ಬ ಹ್ವಾದೀತು ಕೆತ್ತಿ " ಅಂತ ಅಂದು ಬಿಟ್ಟೆನಲ್ಲ...
"ಹೇ ಊಟರೆ, ಡುಬ್ಬ ಕೆತ್ತ ಕತೆರೆ, ಡುಬ್ಬ ಕೆತ್ತ ಕತೇರೆ " ಅಂತ ಗೊಂದಲ ಈಗ ತನ್ನ ಮಗನನ್ನು ಎಬ್ಬಿಸಿ ಬಿಟ್ಟೀನ್ರಿ. ದಿಮ್ಮಿ ಬಾತು ತಗೊಂಡು ತಾನು ಚಾಲು ಮಾಡಿ ಬಿಟ್ಟ ಹಾಡಾಕ್ಕ. ನಾವು ಸುಮ್ನೆ ಕುಂತಿವ್ರಿ. ಮೊದಲು ನಮಗೆ ಥಂಡೀನ ತಗೋತ್ರಿ,ನಾ ದೇವಿ ಕಡೆ ಮಾರಿ ಮಾಡಿ ನೋಡುವ ತಾಯಿ ಹೆಂಗ್ ಮಾಡ್ತೀದಿ ನೋಡು ಅನ್ನವ. ನಮಗ ಏನೇನ ಎರಡು ಸವಾಲು ಹಾಕಿದ.
” ಅರೇ ಶೇಂಗಾ.. ಅರೇ ಶೇಂಗಾ..
ಶೇಂಗಾ ಬಿತ್ತಿದ್ರ ಸುಗ್ಗಿ ಚೆಲ್ಲಾಟ
ಶೇಂಗಾ… ಶೇಂಗಾ …” ಅಂತ ಎಳದು ಎಳದು ಅವರ ಭಾಷಾದಾಗ ಹಾಡಾಕ್ಕ ಶುರು ಮಾಡಿದ. ಅಷ್ಟು ಹೊತ್ತಿಗೆ ನಾನು ಶ್ರವಣ ಕುಮಾರನ ಪದ ಹಾಡಕ್ಕ ಶುರು ಮಾಡಿದೆ.
“ಕಲ್ವಿಕದೊಳಗಿನ ಕರ್ಮ ಹೆಚ್ಚಿತು
ಕೆಟ್ಟು ಹೋಯ್ತು ಭುವನ
ಯಾರೂ ಕಾಣಲಿಲ್ಲ ಶಿವನ ಸಾಧು
ಶ್ರಾವಣನ ಕತೀ ಕೇಳಿದ್ರ
ಆಗುತ್ತೀರಿ ಪಾವನ… ”
ಇದು ಭಾರಿ ಪದಾರಿ ಅದನ್ನು ನಾನು ಹಾಡಿದೆ ಕಂಡಪಟ್ಟಿ ಮಂದಿ ಕೂಡಿತ್ತು.

ಹೇ ಗೊಂದಲಿಗ್ಯಾ ನಿನ್ನ ಶೇಂಗಾ ನಾಟಗಿ ಒಡದ ಹೊಲಸು ನಾರತಾವು ..ತೆಗಿ ಆ ಕಡೆ . ಶೇಂಗಾ ಶೇಂಗಾ ಅಂತ ಬಿಡು ನಿನ್ನ ಹಾಡ. ಆ ಹುಡುಗ ಎಷ್ಟು ಚೆಂದ ಹಾಡಕ ಹತ್ಯಾನ ಅಂತ ಹೇಳಿ ಎಲ್ಲರೂ ಅವಂಗ ಬೈದ್ಬಿಟ್ರು . ತನ್ನ ಸಾಮಾನು ಸಹಿತ ಒಗ್ಯಾತಿಯಾಗಿ ಇಟ್ಟುಕೊಳ್ಳಿಲ್ಲ . ಸುಮ್ಮನೆ ಹೋಗಿ ಹಾಸಿಗೆಯಾಗ ಮಲಗಿಕೊಂಡು ಬಿಟ್ಟವ ಹೊತ್ತು ಹೊಂಡುತನ ಏಳಲಿಲ್ಲ. ಆವಾಗ ಅಗ್ಗದ ಕಾಲಕ್ಕೆ ನನಗೆ ದೀಡಸೆ (150)ರುಪಾಯಿ ಆಹೇರಿ ಆಗಿತ್ತು. ಆಗಿನ ಕಾಲಕ್ಕೆ ಒಬ್ಬೊಬ್ಬರು ಎಂಟಾಣೆ ಆಹೇರಿ ಮಾಡೋವ್ರು ಎಂದೆನ್ನುತ್ತಾ ತಾವು ಪಡೆದ ಆಹೇರಿ ಪಡೆದ ಖುಷಿಯನ್ನು ಬಸಪ್ಪ ಶರಣರು ಸಂಭ್ರಮಿಸುವರು. ನಾವು ಕಾರ್ಯಕ್ರಮದಾಗ ಎಲ್ಲಿ ಬೇಕಲ್ಲಿ ವಾದಿ ಪ್ರತಿವಾದಿ ಮಾತಿನ್ಯಾಗ ಅವರು ಸುಮಾರಾಗ್ಯಾರ ನಮ್ಮನ್ನು ಸುಮಾರು ಮಾಡಿಲ್ಲ ಆ ದೇವಿ ಎಂದು ಆ ದೇವಿಯನ್ನು ಹೃದಯ ತುಂಬಿ ಕೊಂಡಾಡುವರು.
ಮುಂದುವರೆಯುತ್ತದೆ ….
H R ಬಾಗವಾನ ಲೇಖಕರು

