ಒಮ್ಮೆ ಮುದ್ದೇಬಿಹಾಳಕ್ಕೆ ನಾನು ನನ್ನ ಜೊತೆ ಹಿಂದ ಪದ ಹಾಡುವ ಕಲಾತಂಡದ ಗೆಳೆಯ ಇಬ್ಬರೂ ಕೂಡಿ ಮುದ್ದೇಬಿಹಾಳದ ಹಳೆಯ ತಹಶೀಲ್ದಾರ್ ಕಚೇರಿಯ ಹತ್ತಿರ ಮನೀ ಸಂತಿಗಂತ ಹೊಂಟಿದ್ದಿವಿ. ಅಲ್ಲಿ ಆ ಮೈದಾನದಲ್ಲಿ ಕಟಗರ ದಾವಲಸಾಬ್ (ಜೋಗಪ್ಪ ) ಮೂರ್ನಾಲ್ಕು ಗಂಡು ಜೋಗಪ್ಪಗಳು ಕೂಡಿ ನಿಂತಿದ್ರು ಆಲಮಟ್ಟಿ ಹತ್ತಿರ ಬೇನಾಳದಾಕಿ ಒಬ್ಬಾಕಿ ಗೀಗಿ ಪದ ಚೌಡಕಿ ಪದ ಹಾಡಾಕಿ. ಎಲ್ಲರೂ ಕೂಡಿಕೊಂಡು ಅಲ್ಲಿ ಪದಾ ಹಾಡಾಕ್ಕ ಹತ್ತಿದ್ರು.ಅದನ್ನು ಕೇಳಾಕ್ಕ ಮಂದಿ ಮುಕ್ರಿ ಬಿದ್ದಿದ್ರು.
ನಾವು ಕಲಾವಿದರಲ್ಲ ನಮಗೂ ಕೇಳಬೇಕಂತ ಆಸೆ ಆಯ್ತು. ಅಲ್ಲಿಗೆ ಹೋದೆವು. ಅವರ ಹಾಡ ಹಾಡೋದು ಮುಗಿತು. ಆ ದಾವಲಸಾಬ ಸಹ ನನಗೆ ಪರಿಚಯ ಇದ್ದ. ಅವ ನಮ್ಮನ್ನ ನೋಡಿದ ಹೇ… ಬಸ್ಸು ಬಾಯಿ ಇಲ್ಲಿ ಅಂತ ಕರೆದ. ನಾವು ಹೋಗಿ ಅಲ್ಲಿ ಕುಂತಿವೆ. ಬಸ್ಸು ನೀವೊಂದು ಪದ ಹಾಡು ಅಂದ. ಮತ್ತು ಜೋರ್ ಮಾಡಿದ.ನಾ ಹಾಡಿದಿನ್ರೀ, ಹಾಡು ಮುಗಿಯೋಕೆ ಹಾಯೇರಿ ರೊಕ್ಕ ದಬ ದಬ ಅಂತ ಬೀಳಾಕ್ಕ ಶುರುವಾಯಿತು.
ಅವರೆಲ್ಲ ರೊಕ್ಕ ತಗೊಂಡು ನಮಗೊಂದು ಕಪ್ಪು ಚಹಾ ಕುಡಿಸಿ ಬಿಡಾಂವಾ ..ಅವಂಗ್ ಅದೆ ಲಾಭ ನಮಗೆ ಇದೆ ಲಾಭ. ಅಲ್ಲಿ ಬೆನಾಳದಾಕಿ ಅನುಭವದ ಪದ ಹಾಡಿದಳು. ಅಕಿನ ಅನುಭವದ ಪದ ಕೇಳಿಂದ ನಮಗೂ ಹಾಡುವಾಂಗಾತು . ಆ ಹಾಡಿನ ಮುಂದಿನ ಭಾಗ ನಾ ಹಾಡಿದೆ.
“ಹೆಚ್ಚಿನ ಜನ್ಮವಿದು ಎಚ್ಚರ ಹಿಡಿ ಲಘು
ನುಚ್ಚು ತಿನ್ನುವುದೊಂದು ಹುಚ್ಚನಾಯಿ
ಅಚ್ಚುತಾನಂದನ ನಾನುವ ಭಜಿಸದೇ
ಮರೆತು ತಿರುಗುವುದು ಮಾದರ ನಾಯಿ
ಹೆಚ್ಚು ಕಮ್ಮಿ ಎಂದು ಹೆಣಗಾಡು ಮೂಳಾ
ಮಚಗರ ಮನಿಯಾನ ಮುದಿನಾಯಿ
ಕಚ್ಚಿ ಕೈ ಬಾಯಿ ಸ್ವಚ್ಛ ಇಲ್ಲದವನ
ನರಕಿತ್ತು ಬೀಳುವ ಕೀಳಗರ ನಾಯಿ
ಅರಿವು ತನ್ನೊಳಗಿರಲು ಮರೆತು ತಿರುಗಲು ಬೇಡ
ಕೆರವು ಕಡಿದಂತ ಕರಿನಾಯಿ
ಗುರು ಹಿರಿಯರ ಮಾತು ಅಲ್ಲದ ಮೂರ್ಖನು
ಕುರಿ ಕಾಯೋ ಕುರುಬರು ನಾಯಿ,
ಅಲ್ಲಿದು ನಿನ್ನ ನಡಿ ಬಲ್ಲೆ ನೆನಬೇಡ
ಹಲ್ಲು ಮುರುಕ ಗೊಲ್ಲರ ನಾಯಿ
ಪಟುತರದೇವನ ದೇವನ ದಿಟವನು ಹಿಡಿಯದೆ
ಚಟಕೆ ತಿರುಗುವುದು ಕಟುಕರ ನಾಯಿ
ಅರವೀನ ಕಾಯಿ ಇದು ಅರಿವಂತ ನಂಬಿದಿ
ಅರುವಗೇಡಿ ದಾಸರ ನಾಯಿ
ನಂಬಿಕೆ ಇಲ್ಲದ ಕಂಡಂಗ ತಿರುಗುವ
ಡೊಂಬರ ಮನಿಯಾನ ಹಂಡಬಂಡ ನಾಯಿ
ಅಲ್ಲಿದು ನಿನ್ನ ನಡಿ ಬಲ್ಲೆನೆನಲು ಬೇಡ
ಹಲ್ಲು ಮುರುಕ ಗೊಲ್ಲರ ನಾಯಿ
ಪಟುತರ ದೇವನ ದಿಟವನು ಹಿಡಿಯದೆ
ಚಟಕೆ ತಿರುಗುವುದು ಕಟುಕರ ನಾಯಿ
ಅಂದಿಗೂ ಇಂದಿಗೂ ಗುರುವು ಒಬ್ಬನೇ ಎಂದು
ಸಂದೇಹ ಅಳಿಯಲು ಸಾಕಿದ ನಾಯಿ
ತಂದೆ ಬಲ ಭೀಮನ ಶೃತಿಗಳಿಗೆ
ನಿಂದಾಡುವದೊಂದು ಕೆಂದ ನಾಯಿ ..”
ಈ ಪದಾ ಹಾಡಿದಿನ್ರಿ. ಇದು ಬಳಬಟ್ಟಿರಾಜಪ್ಪನವರದ್ದು ದಿಗಿ ಪದ ಹಾಡು ಹೆಣ್ಮಗಳು ಮಾದರಾಕಿ ಅದು ನನಗ್ ಗೊತ್ತಿದ್ದಿಲ್ಲ. ನಾ ಹಾಡಿದಾಂಗ ಹಾಡಿದ್ಯಾ. ಅಕಿ ಹಾಂ..! ಇವ ನನ್ನ ಮ್ಯಾಗ ಹಾಡಿದ ನಂತರ ಸಿಟ್ಟು ಮಾಡಿಕೊಂಡುಬಿಟ್ಟಳು ಚೌಡ್ಕಿತ್ತು ಇನ್ನ ನನ್ನ ಬದಲಾಗಿತ್ತು ಬರಂತ ಕಸಿದು ಬಿಟ್ಟಳು.
“ಏ …ದಾವಲ್ ಸಾಬ್ ತಗೋ ಸುತಿ “ಎಂದಳು.
“ಜನ ನೋಡ್ತೀರಾ ಬಿರ್ ಅಂತ ಬಿಗದ . ನಾ ಹಾಡಿದ್ರ ಮಂದಿನು ಹಂಗ ಕೊಡ್ತಾರ. ನಮ್ಮೂರ ಗೆಳೆಯ ನಾ ಕೂಡಿ ಸಂತಿಗೆ ಹೋದವರು. ಅಕಿ ಸವಾಲ್ ಹಾಕಿ ಹಾಡಾಕಿ. ಅಲ್ಲಿಂದ ಒಂದು ಇಲ್ಲಿಂದ ಒಂದು ತಗೊಂಡು ಬಲ್ಲಂಗ ಹಾಡಿದರೆ ಮುರಿತೀನಿ ನಿನ್ನ ಬಾಯಾಗಿನ ಹಲ್ಲ …” ಅಂದಳು.
“ಸೂಜಿಮುನಿ ಎಷ್ಟು ಬಾಗಲದಾಗ
ಆನೆ ಕುದುರೆ ಹಾದು ಹೋಗ್ಯಾವ
ಏನಂತ ಹೇಳಬೇಕು ? ಹೇಳಿಲ್ಲ ಅಂದ್ರೆ
ಮೂರು ಗೇಣಿನ ಗೂಟ ಕೆತ್ತಿ ಬಡಿತೀನಿ ”
ಅಂತ ಹೇಳಿ ಬಿಟ್ಟಳು.
ಇದು ಕೇಳಾನ ಕೂಡಿದ ಮಂದಿ ಕೂಗು ಹೊಡೆದು ಬಿಟ್ರು ಎಲ್ಲರೂ ನಗಲಿಕ್ಕ ಹತ್ತಿದ್ರು. ನಾನು ನಗಲಿಕ್ಕ ಹತ್ತಿದಿನ್ರಿ . ತುಂಬಾ ಖುಷಿಯಿಂದ ಆ ಸವಾಲನ್ನು ಸ್ವೀಕರಿಸಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿ ನಗು ಬಂತು.
'' ಸುಮ್ಮ ಸುಮ್ಮನ ಗೂಟಾ ಬಡಿದಿ
ಕುಂಬಾರ ಮಾಡಿದ ಗಡಗಿ ಕಡಾ ತಂದಿದಿ
ಸುಮ್ಮ ಸುಮ್ಮನೆ ಕೂರಿ ಬೇಡಿದಿ. "
ಅವರು ಗೀಗಿ ಪದದವರು.ಹಾಡೋರು ಬೇರೆ ಹಿಂಗೆ ಹಾಡಿಬಿಟ್ರು ಹಾಡಿದ ಕೂಡಲೇ ನಾ ನಗಲಕ್ಕ ಹತ್ತಿದ್ದೆ .ಊರ ಅಭಿಮಾನ ಅಲ್ರಿ ಸಿಕ್ಕಾಪಟ್ಟೆ ಸಿಟ್ಟು ಬಂದು ಬಿಡ್ತು ನಮ್ಮ ಗೆಳೆಯಾಗ.
" ಹೇ ... ಶರಣ " ಅಂದ. ನಮ್ಮ ಗೆಳೆಯ
"ಯಾಕ್ರಿ ಸರ್ ಏನಾಯ್ತು ? "
" ಏ....ತಗೋ ಚವಡ್ಕಿ ಅಕಿ ಏನ್ ಅಂತಾಳ ? " ಅಂದ .
"ಇರ್ಲಿ ಬಿಡ್ರಿ "ಅಂದೆ.
" ಏಯ್... ತಗೋತಿ ಇಲ್ಲ ಅಂದವ್ನೆ ನನ್ನ ಹೊಡ್ಯಾಕ್ ಬಂದನ್ರೀ, ಯಾಕಂದ್ರೆ ಊರ ಮರ್ಯಾದೆ ಪ್ರಶ್ನೆ ಅವನಿಗೆ ಕಾಡಕ್ ಹತ್ತಿತ್ತು.ಮತ್ತನಾ ಚೌಡಕಿ
ತೆಗೆದುಕೊಳ್ಳಿಲ್ಲಂದ್ರ ಒಂದು ಎಟ ಕೊಟ್ಟು ಬಿಡುತ್ತಿದ್ದ. ನಾನು ತಗೋಬೇಕಾತ್ರಿ ಚೌಡಕಿ ತಗೊಂಡು ಆಕಿಗೆ ನಕ್ಕುಂತ ಹೇಳಿದೀನ್ರಿ. “
“ನೋಡವ್ವ ಇದು ನಿನಗೆ ದೊಡ್ಡ ಪ್ರಶ್ನೆ ಆಗಿದೆ. ನನಗೇನು ಇದು ದೊಡ್ಡದಲ್ಲ. ಅದು ಸೂಜಿ ಮನಿಯಷ್ಟು ಬಾಗಿಲ ನಿನಗೆ ಹೇಳಿದರು ತಿಳಿಯಂಗಿಲ್ಲ. ಆ ಬಾಗಿಲದಾಗ ಬರೇ ಆನೆ ಕುದುರೆ ಹಾದು ಹೋಗಿಲ್ಲ.
84 ಜೀವರಾಶಿಗಳು ಬ್ರಹ್ಮ ಹರಿ ರುದ್ರ ಎಲ್ಲರೂ ಅದರಾಗ ಬಂದಾರ ಅದು ನಿನಗೇನು ಗೊತ್ತೈತಿ ಮಣ್ಣು, ಅದಕ್ಕೆ ಬ್ರಹ್ಮರಂದ್ರ ಅಂತಾರೆ ಬ್ರಹ್ಮರಂದರದೊಳಗೆ ಈ ಜಗತ್ತು ಬಂದಾದ. ಅದಕ್ಕೆ ನಿನಗ ತಿಳಿಯುತ್ತದೆ ಏನು ?ನೀನು ಯಾರದರ ಒಂದು ಎಂಜಲು ನುಡಿ ಕದ್ದುಕೊಂಡು ಹಾಡಾಕಿ , ಆದರೆ ನಿನ್ನ ಬಾಗಿಲ ನಿನ್ನ ಉತ್ತರ ಅದು “ಅಂದೆ.
"ಮತ್ತ ಕುಂಬಾರ ಮಾಡಿದ ಗಡಿಗೆ ಕಡಾ ತಂದಿದಿ
ಸುಮ್ಮಸುಮ್ಮನ ಕೂಲಿ ಬೇಡ್ತೀನಿ ಅಂತ ಹೇಳಿದಿ.
ಇನ್ನೂ ಗಡಗಿ ಒಂದು ಕೊಡ್ತೀನಿ
ತನ್ನ ತಾನು ತಿಳಿದ ಮೇಲೆ ಇನ್ನೇನು ಇನ್ನೇನು
ತನ್ನಂತೆ ತಾ ಸರ್ವರ ಜೀವ ಮನ್ನಿಸಿ
ಮೂಕನಾದ ಮೇಲೆ ಇನ್ನೇನು ಇನ್ನೇನು.
ತಾನೇ ಪೃಥ್ವಿ ಅಪ್ಪು ತೇಜ
ತಾನೇ ವಾಯು ಆಕಾಶ ಆತ್ಮ
ತಾನೆ ಸೂರ್ಯ ತಾರೆ ಚಂದ್ರ
ತಾನೇ ಬ್ರಹ್ಮಾಂಡ ಆದ ಮೇಲೆ
ನಿನ್ನ ಗಡಗಿ ಎಲ್ಯದ ತಗೊಂಡು ಬಾ ll ೧ ll
ಮುಂದಿನ ಭಾಗ
ನೋಡಿ ನಾಳೆಯ ಸಂಚಿಕೆಯಲ್ಲಿ –

