ಸುಮಾರು 25 ವರ್ಷಗಳ ಹಿಂದೆ ಕಿರುತೆರೆಯಲ್ಲಿ ಪಾತ್ರಗಳನ್ನ ಮಾಡುವುದಕ್ಕೆ ಶುರು ಮಾಡಿದ ಬಹಳಷ್ಟು ಕಲಾವಿದರು ಈಗಿನ ಸಂದರ್ಭದಲ್ಲಿ, ಕೆಲವರು ನಮಗೆ ಕಾಣಸಿಗುತ್ತಾರೆ ಇನ್ನೂ ಬಹಳಷ್ಟು ಜನ ಕಲಾವಿದರು ನಮಗೆ ಕಾಣಸಿಗುವುದಿಲ್ಲ ಕಾರಣ ಅವರಿಗಾಗಿರುವ ವಯಸ್ಸು ಅಥವಾ ಅವರಿಗೆ ಸೂಕ್ತ ಅವಕಾಶ ಸಿಗದೇ ಇರುವುದು ಕೂಡ ಕಾರಣವಿರಬಹುದು.
ಭಾರತೀಯ ಚಿತ್ರರಂಗದ ದಂತಕಥೆ,ಕನ್ನಡಿಗರ ಆರಾಧ್ಯ ದೈವ, ವೃತ್ತಿ ರಂಗಭೂಮಿಯ ಅತ್ಯಂತ ದೈತ್ಯ ಪ್ರತಿಭೆ ಡಾಕ್ಟರ್ ರಾಜಕುಮಾರ್ ಯಾವಾಗಲೂ ಹೇಳುತ್ತಿದ್ದ ಒಂದು ಮಾತು ಅಂದ್ರೆ,ಕಲಾವಿದರಿಗೆ ತೃಪ್ತಿ ಅನ್ನುವುದೇ ಇರುವುದಿಲ್ಲ, ಕಲಾವಿದರಿಗೆ ವಯಸ್ಸು ಆಗುವುದಿಲ್ಲ, ಯಾಕೆಂದರೆ ಕಲಾವಿದರ ಮನಸ್ಸು ಯಾವತ್ತೂ ಉತ್ಸಾಹ ಮತ್ತು ಸಂಭ್ರಮದಿಂದ ಕೂಡಿರುತ್ತದೆ ಎಂದು.ಬಹುತೇಕ ಎಲ್ಲಾ ಅನುಭವಿ ಹಿರಿಯ ಕಲಾವಿದರು ಮತ್ತು ಹಿರಿಯರಾಗುತ್ತಿರುವ ಎಲ್ಲ ಕಲಾವಿದರು ಅಣ್ಣಾವ್ರ ಮಾತನ್ನು , ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ.
ಸುಮಾರು 72 ವಯಸ್ಸಿನ ಈ ಕಲಾವಿದೆ ಯ ಹೆಸರು ಮಾಲತಿಶ್ರೀ ಮೈಸೂರು,ಹುಟ್ಟಿದ್ದು ಮೈಸೂರು ಆದರೂ ಬದುಕು ಕಟ್ಟಿಕೊಂಡಿದ್ದು ಉತ್ತರ ಕರ್ನಾಟಕದ ಜನರ ಮಧ್ಯೆ ಜೊತೆಜೊತೆಗೆ ಕರ್ನಾಟಕದ ಎಲ್ಲ ಜನರು ಕೊಟ್ಟ ಪ್ರೀತಿಯ ಮಧ್ಯೆ.

ಮೂಲತಹ ವೃತ್ತಿರಂಗಭೂಮಿಯ ಕಲಾವಿದೆಯಾದ ಮಾಲತಿಶ್ರೀ ಮೈಸೂರು,1962 ರಲ್ಲಿಯೇ ಮುಖಕ್ಕೆ ಬಣ್ಣವನ್ನು ಹಚ್ಚಿಕೊಂಡು ವೃತ್ತಿರಂಗಭೂಮಿ ಎಂಬ ಶ್ರೇಷ್ಠ ವೇದಿಕೆಯ ಮೇಲೆ ತಾವು ಒಬ್ಬ ಕಲಾವಿದೆಯಾಗಿ ಪ್ರವೇಶ ಪಡೆದರು,ಆಗ ಅವ್ರ ವಯಸ್ಸು 8. ಸುಮಾರು 35ಕ್ಕೂ ಹೆಚ್ಚು ವರ್ಷಗಳ ಕಾಲ ರಂಗಭೂಮಿಯಲ್ಲಿ ನಟಿಯಾಗಿ ಕೆಲಸ ಮಾಡುತ್ತಾ ಸುಮಾರು 10000ಕ್ಕೂ ಹೆಚ್ಚು ಪ್ರದರ್ಶನಗಳನ್ನ ಜನರ ಮುಂದೆ ಮಾಡಿ ತೋರಿಸಿದ ದಿಟ್ಟ ಕಲಾವಿದೆ.
ಕಾಲಕ್ರಮೇಣ ನಾಟಕ ನೋಡುವವರ ಸಂಖ್ಯೆ ಕಡಿಮೆಯಾದಂತೆ, ನಾಟಕ ಕಂಪನಿಗಳಿಗೆ ನಷ್ಟವಾಗುವ ಸಮಯ ಬಂದಾಗ ಮಾಲತಿಶ್ರೀ ಅವರು ತಮ್ಮ ಬದುಕನ್ನ ಕಟ್ಟಿಕೊಳ್ಳಲು ಬೆಂಗಳೂರಿನತ್ತ ಬರುತ್ತಾರೆ,ಅದು 2001 ರ ಸಮಯ.
2001 ರಿಂದ 2026 ರ ತನಕ,ಮಾಲತಿಶ್ರೀ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಕಿರುತೆರೆ ಮತ್ತು ಹಿರಿತೆರೆಯಲ್ಲಿ, ಇಲ್ಲಿಯ ತನಕ ಸುಮಾರು ನೂರಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಇವರು, ಅದೇ ಸಂಖ್ಯೆಯ ಅಂದರೆ ನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ.
ಕಿರುತೆರೆ ಮತ್ತು ಹಿರಿತೆರೆಯಲ್ಲಿ ಪಾತ್ರಗಳನ್ನ ಮಾಡುತ್ತಲೇ ತಮಗೆ ಅದ್ಭುತವಾದ ಬದುಕು ಕೊಟ್ಟಂತಹ ರಂಗಭೂಮಿಯನ್ನು ಇವರು ಮರೆಯಲಿಲ್ಲ,
2003 ರಲ್ಲಿ ಆಶಾಕಿರಣ ಕಲಾ ಟ್ರಸ್ಟ್ ಸಂಸ್ಥೆ ಒಂದನ್ನ ಸಂಸ್ಥಾಪಿಸಿ ಅದಕ್ಕೆ ಅಧ್ಯಕ್ಷರು ತಾವೇ ಆಗಿ,ಸಂಪೂರ್ಣವಾಗಿ ಹೆಣ್ಣು ಮಕ್ಕಳ ತಂಡವನ್ನೇ ಕಟ್ಟಿಕೊಂಡು ಕರ್ನಾಟಕದಾದ್ಯಂತ ಬಹಳಷ್ಟು ನಾಟಕ ಪ್ರದರ್ಶನಗಳನ್ನ ಮಾಡಿದ್ದಾರೆ.
2015 ರಿಂದ ಇಲ್ಲಿಯ ತನಕ ನಾಟಕ ಕಲಿಯುವ ಉತ್ಸಾಹಿ ಯುವಕ ಯುವತಿಯರಿಗೆ,
ತಾವೇ ಉಚಿತವಾಗಿ ನಟನಾ ತರಬೇತಿಯನ್ನು ನೀಡುವುದರ ಜೊತೆಗೆ, ಅವರಿಗೆ ಊಟ ತಿಂಡಿ ವ್ಯವಸ್ಥೆಯನ್ನು ಮಾಡಿ ಮಾಡಿ,ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿರುವ ಅನಾಥಾಶ್ರಮಗಳು, ವೃದ್ಧಾಶ್ರಮಗಳು,
ಮಕ್ಕಳ ಆಶ್ರಮಗಳು, ಮಹಿಳಾ ಸಾಂತ್ವಾನ ಕೇಂದ್ರಗಳು ಸೇರಿದಂತೆ ಬಹಳಷ್ಟು ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಉಚಿತ ನಾಟಕ ಪ್ರದರ್ಶನಗಳನ್ನು ನೀಡಿ ಬಂದ ಹೆಗ್ಗಳಿಕೆ ಈ 72 ವರ್ಷ ವಯಸ್ಸಿನ ನಟಿಯದ್ದು.
ಮಾಲತಿಶ್ರೀ ಬಹಳ ದೊಡ್ಡ ಶ್ರೀಮಂತ ಕಲಾವಿದೆ ಅಲ್ಲ, ಆದರೆ ತುಂಬಾ ದೊಡ್ಡ ಹೃದಯ ಶ್ರೀಮಂತಿಕೆಯ ಕಲಾವಿದೆ ಎಂದರೆ ಅತಿಶಯೋಕ್ತಿಯಾಗಲಾಗದು.
ಇದರ ಜೊತೆ ಜೊತೆಗೆ, ಪ್ರತಿ ವರ್ಷವೂ ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡಿ ಹಿರಿಯರಾದ ನಟ ನಟಿಯರು ಹಾಗೂ ನಾಟಕ ರಚನೆಕಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ಮಾಡುತ್ತಾರೆ ಹಾಗೇ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕೆಲವು ಅಮೂಲ್ಯ ರತ್ನಗಳನ್ನ ಹುಡುಕಿ ಸಾಧಕರಿಗೆ ಸನ್ಮಾನ ಎಂಬ ಕಾರ್ಯಕ್ರಮವನ್ನು ಮಾಡುತ್ತಾರೆ ಮತ್ತು ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದಿರುವ ಸರ್ಕಾರಿ ಶಾಲೆಯ ಮಕ್ಕಳನ್ನ ಆಯ್ಕೆ ಮಾಡಿ, ತಮ್ಮ ಶಕ್ಯಾನುಸಾರ ಪ್ರತಿಭಾ ಪುರಸ್ಕಾರ ಮಾಡಿ ಅವರನ್ನು ಪ್ರೇರೇಪಿಸುತ್ತಾರೆ.ಇದನ್ನು ಹೊರತುಪಡಿಸಿ ತಮ್ಮ ಆಶಾಕಿರಣ ಕಲಾ ಟ್ರಸ್ಟ್ ಮೂಲಕ ಬಹಳಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು, ಎಷ್ಟೋ ಸಂಸ್ಥೆಗಳಿಗೆ ಮತ್ತು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ ಉದಾಹರಣೆಗಳು ಉಂಟು.
ಮಾಲತಿಶ್ರೀ ಮೈಸೂರು ಇಲ್ಲಿಯ ತನಕ ಮಾಡಿದ ಕೆಲಸ ಕಾರ್ಯಗಳ ಸೇವಾ ಪಟ್ಟಿಗಳ ವಿವರ ಬರೆಯುತ್ತ ಹೊರಟರೆ ಅದೊಂದು ದೊಡ್ಡ ಪುಟವಾಗುತ್ತದೆ,
ಇಂತಹ ಮಹಾನ್ ಕಲಾವಿದೆಯ ಮೇಲೆ ಒಟ್ಟು ಆರು ಪುಸ್ತಕಗಳು ಮುದ್ರಣವಾಗಿದ್ದು, ಆ ಪುಸ್ತಕಗಳಲ್ಲಿ ಇವರ ಎಲ್ಲಾ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತದೆ,
(ಮಾಲತಿಶ್ರೀ ಯವರ ಬಗ್ಗೆ ಪ್ರಕಟವಾದ ಪುಸ್ತಕಗಳು ಈ ಕೆಳಗಿನಂತಿವೆ..ತೆರೆ ಸರಿದಾಗ,ತೆರೆ ಸರಿಯಿತು, ಸಿರಿಗಂಧ,ರಂಗಸಾರ್ಥಕ,ಜರ್ನಿ ವಿತ್ ಮಹಾನದಿ ಮತ್ತು ರಂಗ ಚತುರೆ )
ಪ್ರಸ್ತುತ ಜಂಜಿಗಳ ಈ ರಿಲ್ ಝಮಾನದಲ್ಲಿಯೂ ಸಹ,
ಮಾಲತಿಶ್ರೀ ಫುಲ್ ಆಕ್ಟಿವ ಆಗಿ,ಸಮಯ ಸಿಕ್ಕಾಗಲೆಲ್ಲ ತುಂಬಾ ಇಂಟರೆಸ್ಟಿಂಗ್ ಆದ ರಿಲ್ಸ್ ಗಳನ್ನು ಮಾಡಿ ತಮ್ಮ insta ದಲ್ಲಿ ಹಾಕುತ್ತಿರುತ್ತಾರೆ,ಓದುಗರು ಸಮಯ ಸಿಕ್ಕಾಗ ನೀವೊಮ್ಮೆ ಇವ್ರು ಮಾಡಿದ ರೀಲ್ ನೋಡಬಹುದು.
ಈಗ ಈ ಕಲಾವಿದಯ ವಯಸ್ಸು 72, ಆದರೂ ಇವರಲ್ಲಿರುವ ಕಲಾವಿದೆಗೆ ಇನ್ನೂ ವಯಸ್ಸಾಗಿಲ್ಲ, ಇವರು ಹಾಕುವ ಹೆಜ್ಜೆ ಮಾಡುವ ನಟನೆ ಕೊಡುವ ಪ್ರತಿಯೊಂದು ರಿಯಾಕ್ಷನ್ ಎಲ್ಲ ಹೊಸ ಕಲಾವಿದರಿಗೆ ಒಂದು ಮಾರ್ಗದರ್ಶನ.
ಮೈ ಆಟೋಗ್ರಾಫ್ ಚಿತ್ರದಲ್ಲಿ ಕಿಚ್ಚ ಸುದೀಪ ಅವರ ತಾಯಿಯ ಪಾತ್ರ,ಯಜಮಾನ ಚಿತ್ರದಲ್ಲಿ ಮಾಡಿದ ದರ್ಶನ್ ರವರ ಅಜ್ಜಿಯ ಪಾತ್ರ ಇವರಿಗೆ ಕ್ರೇಜ್ ಕೊಟ್ಟಿವೆ,
ಇತ್ತೀಚಿಗೆ ಕಿರುತೆರೆಯಲ್ಲಿ ಬರುತ್ತಿರುವ ಅಮೃತ ಧಾರೆಯ ಅಜ್ಜಿ ಅಂತಾನೆ ಫೇಮಸ್ ಆಗಿರುವ ಇವರು, ಗೌರಿ ಕಲ್ಯಾಣ ಧಾರವಾಹಿಯಲ್ಲಿ ಮಾಡುತ್ತಿರುವ ಇವರ ಪಾತ್ರ ಕುರಿತು ಒಳ್ಳೆಯ ಮಾತು ಕೇಳಿ ಬರುತ್ತಿವೆ.
ರಂಗಭೂಮಿಯಲ್ಲಿ ಸುಮಾರು 62 ವರ್ಷಗಳ ಅನುಭವ, ಹಾಗೆ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸುಮಾರು 25 ವರ್ಷಗಳ ಅನುಭವ, ಇಂತಹ ಅನುಭವಗಳ ಮೂಟೆ ಹೊತ್ತಿರುವ ನಮ್ಮ ಹೆಮ್ಮೆಯ ಕನ್ನಡತಿ ಮಾಲತಿಶ್ರೀ ಮೈಸೂರು ರವರ ಕಲಾಸೇವೆ ಇನ್ನೂ ಬಹಳ ವರ್ಷಗಳ ಕಾಲ ಎಲ್ಲ ಕಲಾರಸಿಕರಿಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ನಮ್ಮ ಹೆಮ್ಮೆಯ ಕನ್ನಡತಿಗೊಂದು ಸಲಾಂ ಹೇಳುತ್ತಾ, ಬನ್ನಿ ಮಾಲತಿಶ್ರೀ ಯವರ ಕಲಾ ಸೇವೆಯನ್ನ ಸಂಭ್ರಮಿಸೋಣ…
ರವೀ ಸಾಸನೂರ್ MasterNews365

