ಒಮ್ಮೆ ಚೌಡಕಿ ಮ್ಯಾಳ ತಗೊಂಡು ಗಣಿ ಎಲ್ಲಮ್ಮನ ಜಾತ್ರೆಗೆ ಹೋಗುತ್ತಿದ್ದೇವು. ಅಲ್ಲಿಗೆ ಸಮಗಾರರು, ಗೊಂದಲಿಗರು ಪದ ಹಾಡಾಕ್ಕ ಕರಸ್ತಾ ಇದ್ರು, ಅಲ್ಲಿ ಅವರು ಸತತ ಐದು ದಿನ ಕಾರ್ಯಕ್ರಮ ಮಾಡ್ತಾ ಇದ್ರು. ನಂತರ ಗೊಂದಲಿಗರಿಗೆ ಐದು ದಿವಸದ ಪಗಾರ ಕೊಟ್ಟು ಹಾಡ ಹಾಡಿಸಿ ಆ ದೇವಿಗೆ ಬಳಿ ಉಡಿಸಿ ಬರುತ್ತಾರೆ. ಇದು ಅವರ ಪದ್ಧತಿ •
ನಮ್ಮನ್ನು ಒಮ್ಮೆ ತಲಾಟಿ ಒಬ್ಬವ ಚಿಮ್ಮಲಗಿ ಊರಿಗೆ ಕರೆದುಕೊಂಡು ಹೋಗಿದ್ದ. ಆ ಗುಡಿ ಸುತ್ತಲೂ ಕೋಟೆ ಗೋಡೆಯಂತೆ ಗೋಡೆ ಕಟ್ಟಿದ್ದಾರೆ. ಅದರ ಒಳಗಡೆ ಆ ಸಮಗಾರರೇ ಇರೋದು. ಅಲ್ಲಿಗೆ ವಿಜಯಪುರ, ಸೋಲಾಪುರ, ಮುಂಬೈಯಿಂದ ಭಕ್ತ ಜನ ಹಿಂಡು ಹಿಂಡಾಗಿ ಬರುತ್ತಾರೆ. ಉಳಿದ ಮಂದಿ ಗುಡಿಯ ಹೊರಗಡೆ ಇಳಿದುಕೊಳ್ಳುವುದು ಅಲ್ಲಿನ ವಾಡಿಕೆ,ಅದರಂತೆ ನಾವೆಲ್ಲ ಕಾಂಪೌಂಡ್ ಹೊರಗೆ ಇಳಿದುಕೊಂಡೆವು. ಗೊಂದಲಿಗರು ಗುಡಿಯ ಮುಂದೆ ಇಳಿದುಕೊಂಡರು.
ದೇವಿಗೆ ಬಳಿ ತೆಗೆಯುವವರು ಸಮಗಾರರು. ಮತ್ತೆ ಅವರೇ ಬಳಿ ತೊಡಿಸುವವರು. ಹೊಸ್ತಿಲ ಹುಣ್ಣಿಮೆಗೆ ಈ ಕಾರ್ಯಕ್ರಮ ಜರುಗುತ್ತದೆ. ಗಣಿ ಎಲ್ಲಮ್ಮನ ಬಳಿ ತೆಗೆಯುವುದು ಹೊಸ್ತಿಲ ಹುಣ್ಣಿಮೆಗೆ. ಮತ್ತೆ ಗುಡ್ಡದ ಎಲ್ಲಮ್ಮನ ಬಳಿ ತೆಗೆಯುವುದು ಬನದ ಹುಣ್ಣಿಮೆಗೆ. ಈ ಸಂದರ್ಭದಲ್ಲಿ ಅಲ್ಲಿನ ಭಕ್ತ ಜನರು ಮನೆಗೆ ಎರಡು ಬ್ಯಾಟಿ ಮಾಡುವರು. ಗೊಂದಲಿಗರು ಒಳಗ ಗುಡಿ ಹತ್ತಿರ ಹಾಡು ಹಾಡಾವ್ರು.ಒಟ್ಟಾರೆ ಎಲ್ಲರೂ ಕೂಡಿ ದೇವಿಯ ಸೇವೆ ಮಾಡಿ ಬರುವರು.
ಗೊಂದಲಿಗರ ಭಾಷೆಯಂತೆ ಅವರು ತುಂಬಾ ಎಳೆದು ಹಾಡವರು ನಮಗೆ ಅವಾಗ ತುಂಬಿದ ವಯಸ್ಸು ಗಟ್ಟಿ ಧ್ವನಿ ಹೊರಗೆ ನಾವು ಶುಚಿ ಹಿಡಿಯಬಹುದೆಂದರೆ ಶ್ರುತಿ ಹಿಡಿದೆವೆಂದರೆ ಒಳಗಿನ ಜನರೆಲ್ಲ ಕಿತ್ತಿ ಹುಡಿಯ ಹೊರಗಡೆ ಬಂದು ನನ್ನ ಹಾಡನ್ನು ಕೇಳುವರು ಅದನ್ನು ಕೇಳಿ ಗೊಂದಲಿಗರು ಹೊರಗೆ ಬಂದು ಕುಂತು ಹಾಡ ಕೇಳೋರು.
ಗೋಪಾಲ ಅಂತ ಸಮಗಾರ ಜನಾಂಗದ ಒಬ್ಬ ಮುಖಂಡ. ಆತನು ಬಂದು ನನ್ನ ಹಾಡ ಕೇಳಿದ. ಮುಂಜಾನೆ ಸೂರ್ಯೋದಯ ಆದ ನಂತರ ಇನ್ನೇನು ನಾವು ನಮ್ಮ ಊರಿಗೆ ಬರೋರು. ನಾವು ಹೊರಡಬೇಕು ಅನ್ನೋದ್ರಾಗ ಗೋಪಾಲ ಬಂದು ನಮ್ಮನ್ನು ನೋಡಿ ಯಾವೂರಿನವರು ಅಂತ ಮಾತಾಡಿಸಿದ.
” ನಾವು ಹಳ್ಳೂರಿನವರು ” ಅಂದೆವು.
“ಏನು ಹರಕತ್ತಿಲ್ಲ ನಿಮ್ಮ ಪದ ಕೇಳಿ ಬಹಳ ಆನಂನಂದಾತು. ಇವತ್ತು ಗುಡಿ ಮುಂದೆ ನೀವು ಹಾಡ್ರಿ ಅಂದ.
ಅವಾಗ ನಮ್ಮ ಹೊಲಗಳಿಗೆ ಕರೆಂಟ್ ಇದ್ದಿದ್ದಿಲ್ಲ . ಹೊಲದಾಗ ನೀರ್ ಕಟ್ಟಬೇಕಂದ್ರೆ ಹೊಲದಾಗ ಮಟ್ಟಿ ಹೊಡಿಬೇಕಾಗಿತ್ತು.
“ನಮ್ಮ ಹೊಲಗೋಳ ಆಕಾರ ಒಣಗತಾವು ಮಾರಾಯ,ನಾವು ಹೋಗಬೇಕು ಅಂತ ಹೇಳಿದೀವಿ . ಅಷ್ಟೊತ್ತಿಗೆ ಅಂವಾ … ತಲಾಟಿಗೆ ಕರ್ಕೊಂಡು ಬಂದೇಬಿಟ್ಟ. ಅದಕ್ಕೆ ನಾವು ಎಷ್ಟೇ ಹೊತ್ತಾದರೂ ಹೋಗುವವರು ಅಂದೆವು” . ಅದಕ್ಕೆ ಅಂವಾ …
” ನೋಡ್ರಪ್ಪ ನಿಮ್ಮ ಪದ ಮನಸ್ಸಿಗೆ ಬಹಳ ಬಂದವು ಇಂದು ಒಂದು ದಿನ ಗುಡಿ ಮುಂದೆ ನೀವೇ ಹಾಡ್ರಿ. ಇಂದು ರಾತ್ರಿ ಹಾಡ್ರಿ ಅಂದ್ರ ನಮ್ಮ ಸಣ್ಣಪ್ಪನು ಬಹಳ ಎಟ್ಟಿ ತಲೆಕೆಟ್ಟವ ) ಮನುಷ್ಯ ಇದ್ದ. ಹೀಗಾಗಿ ಕೂಡಲೇ ಗೋಪಾಲ ನೇರವಾಗಿ ಗಣಿ ಚಿಮ್ಮಲಗಿ ದೇಸಾಯಿ ಅವರ ಮನೆಗೆ ಭೇಟಿಕೊಟ್ಟು –
“ನಮಸ್ಕಾರ ದೇಸಾಯಿ ಅವರ ” ಅಂದಾನ •
” ಬಾ ಗೋಪಾಲ ಯಾಕ್ ನೀ ಬಂದಿಯಲ್ಲ….!” ಅಂದರಂತೆ.
“ಹಳ್ಳೂರು ಊರಾವ್ರು ಭಜನಾ ಪದ ಹಾಡು ನನಗೆ ಬಹಳ ಮನಸ್ಸಿಗೆ ಬಂದದ. ಇವತ್ತು ಗುಡಿ ಮುಂದೆ ನೀವು ಹಾಡ್ರಿ ಅಂತ ಅಂದ್ರ … ನಾವು ಹಾಡಲ್ಲ ಅನ್ನಾಕ ಹತ್ಯಾರ ” ಅಂತ ಫಿರ್ಯಾದಿ ಹೇಳ್ಯಾನ. ಅದಕ್ಕೆ ಅವ್ರು …
ಮುಂದುವರೆಯುತ್ತದೆ ….
H R ಬಾಗವಾನ ಲೇಖಕರು

