ಭಾಗ-2
ತತ್ವಪದಗಳನ್ನು ಹಾಡಲು ಹೋದಾಗ
ತತ್ವ ಪದಗಾರಿಕೆಯಲ್ಲಿ ನಡೆದ ಹಲವಾರು ಸಂವಾದಗಳು
ತಿಂಥಣಿಗೆ ಹೋದಾಗಿನ ಘಟನೆ –
ನಮಗೆ ತಿಂಥಣಿಗೆ ಕರೆದಿದ್ದರು, ನಾವು ತಿಂಥಣಿಗೆ ಹೋಗಿದ್ದೀವಿರಿ. ಅಲ್ಲಿ ಕಾರ್ಯಕ್ರಮ ಚಾಲು ಆತು ನಾವಿದ್ರ ಈ ಹಾಡ ಹಾಡಕ ಚಾಲು ಮಾಡಿದ್ದೀವಿ .
ಅನುಭವದಡಿಗೆಯ ಮಾಡಿ ಅದ
ಕ್ಕನುಬಾವಿಗಳು ಬಂದು ನೀವೆಲ್ಲ ಕೂಡಿ IIಪII
ತನುವೆಂಬ ಭಾಂಡವ ತೊಳೆದು
ಕೆಟ್ಟ ಮನದ ಜಂಜಡವೆಂಬ ಮುಸುರೆಯ ಕಳೆದು
ಘನವೆಂಬ ಮನೆಯನೆ ಬಳಿದು ಅಲ್ಲಿ
ಬಿನುಗು ತ್ರಿಗುಣವೆಂಬು ಒಲವೊಲೆಗುಂಡನು ತೊಳೆದು Il೧ II
ವಿರುತಿಯೆಂಬುವ ಮಡಿಯುಟ್ಟು ಪೂರ್ಣ
ಹರಭಕ್ತಿ ಎಂಬ ನೀರನೇ ಹೆಸರಿಟ್ಟು
ಅರಿವೆಂಬ ಬೆಂಕಿಯ ಕೊಟ್ಟು ಮಾಯಾ
ಮರವೇ ಎಂಬ ಕಾಸ್ಟಗಳನ್ನೆಲ್ಲ ಸುಟ್ಟು II೨II
ಪರವೆಂಬ ಸಾಮಗ್ರಿ ಗೂಡಿ ಸಾರ
ತರಮೋಕ್ಷವೆಂದೆಂಬ ಪಾಕವ ಮಾಡಿ
ಹರ ಶರಣರು ಸವಿದಾಡಿ ನಮ್ಮ
ಗುರುಸಿದ್ದ ದೇವನ ಚರಣವ ಪಾಡಿ II೩II

ಭಜನಾ ಕಮಿಟಿಯವರು ತಾವು ಜ್ಞಾನಿಗಳು. ನಾನು ಪದ ಹಾಡಿಂದ ಸರಕ್ಕನೆ ನನ್ನ ಎಳೆದುಕೊಂಡು ಅವರು ಏನ ಹರಕತ್ತಿಲ್ಲಪಾ .... ನೀನು ಪ್ರಶ್ನೆನೂ ಕೇಳ್ತಿದಿ, ಉತ್ತರನೂ ಕೊಡ್ತೀದಿ. ಅಂತ ನನಗೆ ಕರೆದು ಅಂದ್ರು. ಅದೇನಂದ್ರೆ - ಅದು ಕೈವಲ್ಯದಾಗ ಹ್ಯಾಂಗ ಅದ ಅಂತ ನನಗೆ ಪ್ರಶ್ನೆ ಮಾಡಿದರು. ತನುವೆಂಬ ಭಾಂಡ ಭಾಂಡ = ಪಾತ್ರೆ) ತೊಳೆದು ಕೆಟ್ಟ ಮನದ ಚಂಚಲವೆಂಬ ಮುಸುರೆಯ ತೊಳೆದು, ಘನವಾಗಿ ಮನೆಯನ್ನು ಬಳಿದು, ಅಂತ ನಾನು ಹೇಳಿದೆ. ಅದಕ್ಕೆ ಅವರು ಅದು ಹಂಗಲ್ಲ, ಅದು ಅಲ್ಲೇ ಬಿನುಗು ತ್ರಿಗುಣವೆಂಬ ಒಲಿಗುಂಡ ತುಳಿದು ಅಂತ ಐತಿ ಅಂದ್ರು.
"ಎಲ್ಲಾ ಬರೋಬ್ಬರಿ ಆದ ಆದರೆ ಹಾಡುವಾಗ ಸ್ವಲ್ಪ ಅಕ್ಷರ ನೋಡಿ ಹಾಡು " ಅಂತ ಅಂದ್ರು.
"ಯಾಕ್ರೀ ಎಲ್ಲಿ ತಪ್ಪೇದೇನು ? ಅಂದೆ ಅದಕ್ಕೆ ಅವರು
"ಅಲ್ಲಿ ಬಿನುಗು (ಬಿನುಗು = ಅಲ್ಪ , ಕ್ಷುದ್ರ ) ತ್ರಿಗುಣವೆಂಬ ಒಲಿಗುಂಡ ತೊಳೆದು ... ಅಲ್ಲಪ್ಪ ...ಅದು ತುಳಿದು ಅಂತ ಐತಿ " ಅಂದ್ರು.
"ಅದಕ್ಕೆ ನಾನು ಹ್ಯಾಂಗ್ರಿ " ? ಅಂದೆ.
"ಒಲಿಗುಂಡ ಹೂಡು ಅಂದ್ರು "
" ಒಲಿಗುಂಡ ಯಾವುದಕ್ಕ ಅಂದಾರ ಅಂತ ಪ್ರಶ್ನೆ ಮಾಡಿದ್ರ... "
"ಗುಣಗಳಿಗೆ ಅಂದಾರ "ಅಂದೆ.
"ಅಂದ್ರೆ ಗುಣ ತೋಳದ್ರ ಹಸನಾಗ್ತದೊ? " ಇಲ್ಲ ತುಳದ್ರ ಹಸನಾಗ್ತದೊ? " ಅಂದೆ.
ಅದಕ್ಕ ಅವರು ಆಲೋಚನೆಗಳಗಾಗಿ ಸ್ವಲ್ಪ ಹೊತ್ತು ವಿಚಾರ ಮಾಡಿ ತಲೆಬಾಗಿ ಸಮ್ಮತಪ್ಪಿನ ಅರಿವನ್ನು ಒಪ್ಪಿಕೊಂಡರು.
"ಹೌದು ತಮ್ಮ ನೀ ಹಾಡಿದ್ದೆ ಸರಿ" ಅಂದ್ರು.
ಹಾಡುವಾಗ ಹಾಡುಗಾರ ತನ್ನ ಅನುಭವದಿಂದ ಅರ್ಥ ತಿಳಿದು ಹಾಡಿದರೆ ಸುದ್ದಾಗ್ತದ, ಆದ್ರೆ ಕೆಲವೊಮ್ಮೆ ಪುಸ್ತಕದಾಗ ಪ್ರಿಂಟ್ ದೋಷ ಆಗಿರ್ತದ. ಆದ್ರೆ ನಾನು ಹಾಡುವುದೆಲ್ಲಾ ಆ ಗುರುನಾಥನ ಆಶೀರ್ವಾದ ಹಾಗೂ ಕೃಪೆಯಿಂದ ಸಾಧ್ಯವಾದಷ್ಟು ಸರಿಯಾಗಿ ಹಾಡ್ತೀನಿ ಅಂತಾರೆ ಬಸಪ್ಪ ಶರಣರು.
ಮುಂದುವರೆಯುತ್ತದೆ ….

