ಪ್ರಾಮಿಸ್ ಅನ್ನುವ ಪದವೇ ತುಂಬಾ ಎಮೋಷನಲ್ ಬಾಂಡಿಂಗನ ಕ್ರಿಯೇಟ್ ಮಾಡುತ್ತದೆ, ದೇಶದ ಹಿತಕ್ಕಾಗಿ ದೇಶಕ್ಕಾಗಿ, ದೇಶದ ನಾಗರೀಕರಾಗಿ ನಮ್ಮ ಪ್ರಾಣವನ್ನು ಕೊಟ್ಟಾದರೂ ಸರಿ ನಾವು ಹೋರಾಡುತ್ತೇವೆ ಎಂದು ಸೈನಿಕರು ಭಾರತ ಮಾತೆಗೆ ಮಾಡುವಂತಹ ಪ್ರಾಮಿಸ್, ಭೂಮಿ ತಾಯಿಯನ್ನು ನಂಬಿ ನಿಸರ್ಗವನ್ನು ನಂಬಿ ತಮ್ಮ ಭೂಮಿಯಲ್ಲಿ, ಒಳ್ಳೆಯ ಬೆಳೆಗಳನ್ನು ಬೆಳೆದು ನಾನು ಎಲ್ಲಾ ಮನುಷ್ಯರಿಗೂ ಕೊಡುತ್ತೇನೆಂದು ರೈತರು ಮಾಡುವ ಪ್ರಾಮಿಸ್,
ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಕ್ಕಳು ಮಾಡುವಂತಹ ಪ್ರಾಮಿಸ್, ರಕ್ಷಾಬಂಧನದ ದಿನ ಸಹೋದರಿಯರಿಗೆ ಅಣ್ಣ,ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಮಾಡುವ ಪ್ರಾಮಿಸ್,
ಹುಡುಗಿ ಒಬ್ಬಳು ತಾನು ಪ್ರೀತ್ಸುವ ಹುಡುಗನಿಗೆ ಅಥವಾ ಹುಡುಗನೊಬ್ಬನು ತಾನು ಪ್ರೀತಿಸುವ ಹುಡುಗಿಗೆ ನಿನ್ನನ್ನ ನಾನೆಂದೂ ಮರೆಯುವುದಿಲ್ಲ ಇದು ನನ್ನ ಪ್ರಾಮಿಸ್, ಹೀಗೆ ಪ್ರಾಮಿಸ್.
ಪ್ರಾಮಿಸ್ ಮೇಲೆ ಒಂದು ಚಿತ್ರ ಸಿದ್ದವಾಗುತ್ತಿತ್ತು ಅದು ಬರೀ ಪ್ರಾಮಿಸ್ ಆಗಿರದೆ ಗಾಡ್ ಪ್ರಾಮಿಸ್ ಆಗಿದೆ, ಚಿತ್ರಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲಿದೆ ನೋಡಿ.
ಗಾಡ್ ಪ್ರಾಮಿಸ್ ಚಿತ್ರೀಕರಣ ಸಂಪೂರ್ಣ: ನವೆಂಬರ್‌ನಲ್ಲಿ ಬೆಳ್ಳಿಪರದೆಗೆ ಬರಲು ಸಜ್ಜಾದ ಸೂಚನ್ ಶೆಟ್ಟಿ ಸಿನಿಮಾ..
ಬೆಂಗಳೂರು: ಶೀರ್ಷಿಕೆಯ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಅಪಾರ ಕುತೂಹಲ ಕೆರಳಿಸಿರುವ ಯುವ ಪ್ರತಿಭೆ ಸೂಚನ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಗಾಡ್ ಪ್ರಾಮಿಸ್’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಶೂಟಿಂಗ್ ಪೂರ್ಣಗೊಂಡಿರುವ ಸಂಭ್ರಮದಲ್ಲಿರುವ ಚಿತ್ರತಂಡ, ತೆರೆಮರೆಯ ಆಕರ್ಷಕ ಕ್ಷಣಗಳನ್ನು ಒಳಗೊಂಡ ಮೇಕಿಂಗ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.
ಚಿತ್ರೀಕರಣ ಮುಗಿದ ಬೆನ್ನಲ್ಲೇ ಬಿಡುಗಡೆಯ ಸುಳಿವು ನೀಡಿರುವ ಚಿತ್ರತಂಡ, “ಮೊದಲ ಕ್ಲ್ಯಾಪ್‌ನಿಂದ ಹಿಡಿದು ಕೊನೆಯ ಶಾಟ್‌ವರೆಗೆ ಇದೊಂದು ಸುಂದರ ಪಯಣ. ತೆರೆಯ ಹಿಂದೆ ಸೆರೆಹಿಡಿದ ಅಸಂಖ್ಯಾತ ನೆನಪುಗಳೊಂದಿಗೆ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ನಮ್ಮ ಕಥೆ ಈಗ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗಿದೆ. ‘ಗಾಡ್ ಪ್ರಾಮಿಸ್’ ಇದೇ ನವೆಂಬರ್‌ನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಸೂಚನ್ ಶೆಟ್ಟಿಗೆ ಜೋಡಿಯಾಗಿ ಜೂಹಿ ಜಯಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಈ ಹಿಂದೆ ‘ಪವಿ ಕೇರ್‌ಟೇಕರ್’, ‘ತಲೈವನ್ ತಲೈವಿ’ ಹಾಗೂ ‘ಸುಮತಿ ಒಲವು’ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಜೂಹಿ, ಈ ಚಿತ್ರದ ಮೂಲಕ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಕರಾವಳಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ತಾರಾಗಣವೇ ಈ ಚಿತ್ರದಲ್ಲಿದೆ. ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ರಘು ಪಾಂಡೇಶ್ವರ, ನವೀನ್ ಡಿ. ಪಡೀಲ್, ರೂಪಾ ವರ್ಕಾಡಿ, ಸಿದ್ಧಿ ಪ್ರಶಾಂತ್, ಪ್ರಸಿದ್ಧ್ ನಾಗ್, ಶೋಭಾ ಶೆಟ್ಟಿ, ಪ್ರತಿಮಾ ನಾಯಕ್, ಅಕ್ಷತಾ ರೈ, ರಾಧಾಕೃಷ್ಣ ಕುಂಬ್ಳೆ, ಪ್ರಭಾಕರ್ ಕುಂದರ್, ರಾಮ್ ಕುಮಾರ್ ಉಪ್ಪುಂದ, ಜಯಶೀಲಾ ಮರೋಳಿ, ಶ್ರುತಿ ಭಟ್, ವಿಶಾಲ್ ಜೈವಿಕ್, ಚಂದ್ರಿಕಾ ಕಾಮತ್ ಹಾಗೂ ಶ್ರಾವ್ಯ ಪುತ್ರನ್ ಸೇರಿದಂತೆ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿದೆ.
ಪಾಂಚಜನ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್‌ನಡಿ ಮಹೇಂದ್ರ ಶೆಟ್ಟಿ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್ ಮಧುಸೂದನನ್ ಸಂಗೀತ ಸಂಯೋಜಿಸಿದ್ದು, ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಹಾಗೂ ನವೀನ್ ಶೆಟ್ಟಿ ಅವರ ಸಂಕಲನವಿದೆ. ಜೊತೆಗೆ ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ ಹಾಗೂ ಎನ್. ಸರವಣ ಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ‘ಗಾಡ್ ಪ್ರಾಮಿಸ್’ ತಂಡ, ನವೆಂಬರ್‌ನಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ಪ್ರೇಕ್ಷಕರ ಎದುರು ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

