ಚಲನಚಿತ್ರ ಯಾವುದೇ ಭಾಷೆಯದೆ ಆಗಿರಲಿ, ಆಯಾ ಭಾಷೆಯ ಆಯಾ ಪ್ರಾಂತ್ಯದ ನಾಯಕ ನಟ ನಟಿಸಿದ ಚಿತ್ರವೊಂದು ಸೂಪರ್ ಹಿಟ್ ಆಗುತ್ತದೆಯೋ ಅಥವಾ ಎವರೇಜ್ ಹೋಗುತ್ತದೆಯೋ ಇದ್ಯಾವುದು ಆಯಾ ನಾಯಕ ನಟರನ್ನು ಪ್ರೀತಿಸುವ ಅಭಿಮಾನಿಗಳಿಗೆ ಮ್ಯಾಟರ್ ಆಗುವುದಿಲ್ಲ.
ತಾವು ಪ್ರೀತಿಸುವ ನಾಯಕ ನಟ ಅಥವಾ ನಾಯಕಿ ಅಥವಾ ನಿರ್ದೇಶಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಬೇಕು ಹಾಗೂ ತಮಗೆ ಮನರಂಜನೆ ನೀಡಬೇಕು ಎಂಬುದನ್ನಷ್ಟೇ ಮನಸಲ್ಲಿ ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ, ಇದು ತಪ್ಪು ಕೂಡ ಅಲ್ಲ.
ತಮ್ಮ ಫೇವರೆಟ್ ನಟನೊಬ್ಬ, ಹಾಸನ ಚಿತ್ರ ಬಂದು ಸುಮಾರು ದಿನಗಳು ಕಳೆದ ನಂತರವೂ ಹೊಸ ಚಿತ್ರದ ಬಗ್ಗೆ ಅಪ್ಡೇಟ್ ಇಲ್ಲ ಮತ್ತು ಅದರ ಕುರಿತಾದ ಮಾಹಿತಿ ಇಲ್ಲ ಎಂದಾಗ ಆಯಾ ನಟರ, ಅಭಿಮಾನಿಗಳಲ್ಲಿ ಬೇಸರ ಮತ್ತು ಕಾಳಜಿ ಎರಡು ಒಟ್ಟಿಗೆ ಉಂಟಾಗುತ್ತದೆ,
ಇದು ಸಾಮಾನ್ಯವಾಗಿ ಜಗತ್ತಿನ ಎಲ್ಲ ನಾಯಕ ನಟರ ಅಭಿಮಾನಿಗಳು,ಚರ್ಚೆ ಮಾಡುವ ಮಾತೆ ಆಗಿದೆ, ಇಂತಹ ವಿಚಾರಗಳನ್ನು ಸ್ವತಹ ನಾಯಕ ನಟರೆ ಸ್ವಾಗತಿಸುತ್ತಾರೆ ಮತ್ತು ಅಭಿಮಾನಿಗಳನ್ನ ಅಷ್ಟೇ ಪ್ರೀತಿ ಗೌರವದಿಂದ ರಿಸೀವ್ ಮಾಡುತ್ತಾರೆ.
ನಾನು ಕೆಲವು ಕಡೆಗಳಲ್ಲಿ ಹೋದಾಗ, ದೊಡ್ಮನೆಯನ್ನ ಅಪಾರವಾಗಿ ಪ್ರೀತಿಸುವಂತಹ ಅಭಿಮಾನಿ ವರ್ಗ,
ಸರ್ ಯುವ ರಾಜ್ ಕುಮಾರ್ ಅವರ ಮುಂದಿನ ಚಿತ್ರ ಯಾವುದು ?
ಅದನ್ನು ಇಂಥವರು ಮಾಡುತ್ತಾರೆ ಅಂತವರು ಮಾಡುತ್ತಾರೆ ಎಂದು ಕೆಲವು ನಿರ್ದೇಶಕರ ಹೆಸರುಗಳನ್ನು ಹೇಳುತ್ತಿದ್ದಾಗ,,ನಾನು ಅವರಿಗೆ ಹೇಳುತ್ತಿದ್ದ ಮಾತು..
ಎಕ್ಕ ಚಿತ್ರದ ನಂತರ ಯುವರಾಜ್ ಕುಮಾರ್ ಅವರು ಬಹಳಷ್ಟು ಕಥೆಗಳನ್ನ ಕೇಳಿದ್ದಾರೆ ಇನ್ನು ಕೆಲವು ಕಥೆಗಳನ್ನು ಕೇಳುತ್ತಲೂ ಇದ್ದಾರೆ, ಕೆಲವು ಕಥೆಗಳು ಓಕೆ ಆಗಿದೆ ಆದರೆ ಫೈನಲ್ ಆಗಿ ಯಾವುದನ್ನ ಓಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ನಿರ್ದೇಶಕರು ಯಾರು ಎಂಬುದು ಕೂಡ ರಿವಿಲ್ ಆಗಿಲ್ಲ,
ಸೋ ಚಿತ್ರತಂಡದಿಂದ ಮತ್ತು ಸ್ವತ: ಯುವ ರಾಜಕುಮಾರ್ ಅವರಿಂದ ಅಧಿಕೃತ ಮಾಹಿತಿ ಪಡೆಯುವವರೆಗೂ ನಾನಾಗಲಿ ನೀವಾಗಲಿ ಮಾತನಾಡುವುದು ಬೇಡ ಎಂದು ಪ್ರೀತಿಯಿಂದ ವಿನಂತಿ ಮಾಡಿಕೊಳ್ಳುತ್ತಿದ್ದೆ, ಕಾರಣ ಇಷ್ಟೇ !!
ನಾವು ಮಾಧ್ಯಮದವರು ನಮಗೆ ಬಹುತೇಕ ಮಾಹಿತಿಗಳು ಲಭ್ಯವಿರುತ್ತವೆ ನಮ್ಮನ್ನು ಕೇಳಿದರೆ ಒಂದಷ್ಟು ವಿಷಯ ತಿಳಿದುಕೊಳ್ಳಬಹುದು ಎಂಬುದು ಅವರ ಆಸೆ, ಅಭಿಲಾಷೆ ಆದರೆ ನಮಗೂ ಒಮ್ಮೊಮ್ಮೆ ಖಚಿತ ಮಾಹಿತಿ ಕೆಲವೊಮ್ಮೆ ತಡವಾಗಿ ಸಿಗುತ್ತದೆ,ಸೋ ನಾನ್ಯಾವತ್ತೂ ಯಾವುದೇ ವಿಚಾರದ ಬಗ್ಗೆ ತಕ್ಷಣಕ್ಕೆ ಯಾರಿಗೂ ಪ್ರತಿಕ್ರಿಯೆ ಕೊಡುವುದಿಲ್ಲ.
ಯುವರಾಜ್ ಕುಮಾರ್ ಅವರ ಮುಂದಿನ ಚಿತ್ರ ಯಾವುದು ನಿರ್ದೇಶಕರು ಯಾರು ಏನು ಕಥೆ ನಿರ್ಮಾಪಕರು ಹೀಗೆ ಮುಂತಾದ ವಿವರಗಳನ್ನು ಗೌರಿ ಗಣೇಶ ಹಬ್ಬದ ಪ್ರಯುಕ್ತ ಪಡೆದುಕೊಂಡಿದ್ದಾರೆ.
ಅದಕ್ಕೆ ಸಂಬಂಧಪಟ್ಟ ಖಚಿತ ಮಾಹಿತಿ ಇಲ್ಲಿದೆ..

ಯುವ ರಾಜಕುಮಾರ್ ಈಗ “ಪವರ್ ಮ್ಯಾನ್”ಗಣೇಶನ ಹಬ್ಬದಂದು ಅನಾವರಣವಾಯಿತು ತರುಣ್ ಸುಧೀರ್ – ಜಗದೀಶ್ ಗೌಡ ನಿರ್ಮಾಣದ ಹಾಗೂ ಜಡೇಶ್ ಕೆ ಹಂಪಿ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ.
ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಅವರ ನಿರ್ಮಾಣದಲ್ಲಿ, ಜಡೇಶ್ ಕೆ ಹಂಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನೂತನ ಚಿತ್ರದಲ್ಲಿ ಯುವ ರಾಜಕುಮಾರ್ ಅವರು ನಾಯಕರಾಗಿ ನಟಿಸುತ್ತಿರುವ ವಿಷಯ ಇತ್ತೀಚೆಗೆ ತಿಳಿದು ಬಂದಿತ್ತು. ಈ ಚಿತ್ರದ ಶೀರ್ಷಿಕೆ ಏನಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಗಣೇಶ ಚತುರ್ಥಿಯ ಶುಭದಿನದಂದು ಈ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಸದಾಶಿವನಗರದ ಡಾ||ರಾಜಕುಮಾರ್ ಅವರು ವಾಸವಿದ್ದ ಜಾಗದಲ್ಲೇ ಈ ಚಿತ್ರದ ಶೀರ್ಷಿಕೆ ಅನಾವರಣವಾಗಿರುವುದು ವಿಶೇಷ. ರಾಘವೇಂದ್ರ ರಾಜಕುಮಾರ್ ಅವರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆರಂಭದಿಂದಲೇ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ “ಪವರ್ ಮ್ಯಾನ್” ಎಂದು ಹೆಸರಿಡಲಾಗಿದೆ. “ದಿ ಗ್ರೇಟೆಸ್ಟ್ ಪವರ್ ಇನ್ ಎ ಗುಡ್ ಹಾರ್ಟ್” ಎಂಬ ಅಡಿಬರಹ ಈ ಚಿತ್ರಕ್ಕಿದೆ.
ನಿನ್ನೆ ತನಕ ನಾವು ಈ ಚಿತ್ರದ ಶೀರ್ಷಿಕೆಯನ್ನು ಡಿಜಿಟಲ್ ಅನಾವರಣ ಮಾಡೋಣ ಅಂದುಕೊಂಡಿದ್ದೆವು. ಆದರೆ, ದೇವರ ದಯೆಯಿಂದ ಅನಿರೀಕ್ಷಿತವಾಗಿ , ಅದರಲ್ಲೂ ಡಾ||ರಾಜಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ವಾಸವಿದ್ದ ಸ್ಥಳದಲ್ಲಿ ನಮ್ಮ “ಪವರ್ ಮ್ಯಾನ್” ಚಿತ್ರದ ಶೀರ್ಷಿಕೆ ರಾಘವೇಂದ್ರ ರಾಜಕುಮಾರ್ ಅವರಿಂದ ಅನಾವರಣವಾಗಿದ್ದು ಬಹಳ ಖುಷಿಯಾಗಿದೆ. ಈ ಚಿತ್ರವನ್ನು ನಾನು ಹಾಗೂ ಜಗದೀಶ್ ಗೌಡ ಅವರು ಸೇರಿ ನಿರ್ಮಾಣ ಮಾಡುತ್ತಿದ್ದೇವೆ. ಅಟ್ಲಾಂಟ ನಾಗೇಂದ್ರ ಸಹ ನಿರ್ಮಾಪಕರಾಗಿದ್ದಾರೆ. ಜಡೇಶ್ ಕೆ ಹಂಪಿ ನಿರ್ದೇಶಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಯವ ರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದಾರೆ. ಇದೊಂದು ಎಲ್ಲರಿಗೂ ಆಪ್ತವಾಗುವ ಕಥೆ. ವಿಶೇಷವಾಗಿ ಮಕ್ಕಳಿಗೆ. ಹಾಗಾಗಿ “ಪವರ್ ಮ್ಯಾನ್” ಎಂದು ಹೆಸರಿಡಲಾಗಿದೆ ಎಂದು ನಿರ್ಮಾಪಕ ತರುಣ್ ಸುಧೀರ್ ತಿಳಿಸಿದರು.
“ಎಕ್ಕಾ” ಸಿನಿಮಾದ ಸಂದರ್ಭದಿಂದಲೂ ನನಗೆ ಯುವ ರಾಜಕುಮಾರ್ ಅವರೊಂದಿಗೆ ಒಡನಾಟವಿತ್ತು. ಯುವ ರಾಜಕುಮಾರ್ ಅವರಿಗೆ ಜಡೇಶ್ ಅವರು ಕಥೆ ಮಾಡುತ್ತಿರುವ ವಿಷಯ ತಿಳಿದಿತ್ತು. ಇತ್ತೀಚೆಗೆ ತರುಣ್ ಸುಧೀರ್ ಅವರು ನಾವು – ನೀವು ಸೇರಿ ಈ ಚಿತ್ರ ನಿರ್ಮಾಣ ಮಾಡೋಣ ಎಂದರು. ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಟೀಸರ್ ಚೆನ್ನಾಗಿದೆ. ಚಿತ್ರ ಕೂಡ ಇನ್ನೂ ಚೆನ್ನಾಗಿರುತ್ತದೆ ಎಂದರು ಮತ್ತೊಬ್ಬ ನಿರ್ಮಾಪಕ ಜಗದೀಶ್ ಗೌಡ.
ನಮ್ಮ ಚಿತ್ರಕ್ಕೆ “ಪವರ್ ಮ್ಯಾನ್” ಎಂದು ಹೆಸರಿಡಲಾಗಿದೆ. “ದಿ ಗ್ರೇಟೆಸ್ಟ್ ಪವರ್ ಇನ್ ಎ ಗುಡ್ ಹಾರ್ಟ್” ಎಂದು ಅಡಿಬರಹವಿದೆ. ಈ ಅಡಿಬರಹದ ಸಾಲೇ ಚಿತ್ರದ ಪ್ರಮುಖ ಕಥಾಹಂದರ ಎನ್ನಬಹುದು. ಇದು ಕೂಡ ಈ ನೆಲದ ಕಥೆ. ಈ ಹಿಂದಿನ ಚಿತ್ರಗಳಲ್ಲಿ ಈ ನೆಲದ ಕಥೆಯನ್ನು ಬೇರೆಬೇರೆ ರೀತಿ ಹೇಳಿದ್ದೆ. ಇದರಲ್ಲಿ ಬೇರೆಯೇ ರೀತಿ ಹೇಳಲು ಹೊರಟಿದ್ದೇನೆ. ಇನ್ನೂ, ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳಂತೂ ಈ ಚಿತ್ರದ ಹೈಲೆಟ್ ಎಂದರೆ ತಪ್ಪಾಗಲಾರದು. ಯುವ ಅವರು ನೃತ್ಯ ಹಾಗೂ ಫೈಟ್ ಎರಡರಲ್ಲೂ ಪರಿಣಿತರು. ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತದಲ್ಲಿ ಒಳ್ಳೆಯ ಹಾಡುಗಳು ಬರಲಿದೆ. ಈಗ ಸ್ಕ್ರಿಪ್ಟ್ ವರ್ಕ್ ಪೂರ್ಣವಾಗಿದೆ. ಚಿತ್ರದ ಹೆಸರು “ಪವರ್ ಮ್ಯಾನ್”. ಆದರೆ ಇದು ಪುನೀತ್ ರಾಜಕುಮಾರ್ ಅವರ ಕುರತಾದ ಚಿತ್ರವಲ್ಲ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಜಡೇಶ್ ಕೆ ಹಂಪಿ ಹೇಳಿದರು.
“ಎಕ್ಕಾ” ಚಿತ್ರ ಬಿಡುಗಡೆಯಾಗಿ ವರ್ಷ ಕಳೆದಿದೆ. ಈ ಚಿತ್ರದ ನಂತರ ನಾನು ನಟಿಸುತ್ತಿರುವ ಚಿತ್ರ ಯಾವುದು ಎಂದು ಎಲ್ಲರೂ ಕೇಳುತ್ತಿದ್ದರು. ಈಗ ಆ ಸಮಯ ಬಂದಿದೆ. ಅದು ಗಣೇಶನ ಹಬ್ಬದ ದಿನ ನನ್ನ ನೂತನ ಚಿತ್ರದ ಶೀರ್ಷಿಕೆ ಅನಾವರಣವಾಗಿದೆ. ಜಡೇಶ್ ಕೆ ಹಂಪಿ ಅವರು ಹಾಗೂ ನಾನು ಸುಮಾರು ತಿಂಗಳಿಂದ ಕಥೆಯ ಬಗ್ಗೆ ಚರ್ಚಿಸುತ್ತಿದ್ದೆವು. ಈಗ ಅದು ಪೂರ್ಣವಾಗಿದೆ. ಕಥೆ ಸಿದ್ದವಾಗಿದೆ. ಚಿತ್ರೀಕರಣಕ್ಕೆ ಹೊರಡಲು ಸಿದ್ದತೆ ನಡೆಯುತ್ತಿದೆ. “ಪವರ್ ಮ್ಯಾನ್” ಹೆಸರಿನಲ್ಲೇ ಪವರ್ ಇದೆ. ಎಲ್ಲರಿಗೂ ಇಷ್ಟವಾಗುವ ಹಾಗೂ ನಾನು ಈ ಹಿಂದೆ ಮಾಡಿರದ ಪಾತ್ರವಿದು. ನಿರ್ಮಾಪಕರಾದ ತರುಣ್ ಸುಧೀರ್, ಜಗದೀಶ್ ಗೌಡ ನಿರ್ಮಾಣದ ಹಾಗೂ ಜಡೇಶ್ ಕೆ ಹಂಪಿ ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಸಂತೋಷವಾಗಿದೆ ಎಂದರು ನಾಯಕ ಯುವ ರಾಜಕುಮಾರ್.

