ಮುನ್ನುಡಿ –
ನೆಲ ಮೂಲ ಸಂಸ್ಕೃತಿಯ ಅನಾವರಣ
“ಪದವಿ ಪ್ರಶಸ್ತಿಗಳ ಹದುಳದಲ್ಲಿ ದೂರಿಟ್ಟು
ಚದುರ ತಾನಾಗಿ ಬೆಳೆದಂತಹ !
ಶರಣನಿಗೆ ಮೊದಲು ಕೈ ಮುಗಿವೆ “
ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಲೇ ಸಾಮಾನ್ಯ ಎತ್ತರಕ್ಕೆ ಏರಿದ ದೇಸಿ ಬದುಕಿನ ಅಮೂಲ್ಯವಾದ ರತ್ನಗಳು ಆಧುನಿಕ ಜೀವನದ ಥಳಕು-ಬಳಕಿನ ಹುಸಿ ಆಚರಣೆಗಳಲ್ಲಿ, ಮಾಧ್ಯಮಗಳ ಪಕ್ಷಪಾತ ಧೋರಣೆಯಲ್ಲಿ ಸುಶಿಕ್ಷಿತ ಪಂಡಿತರ ದಿವ್ಯ ನಿರ್ಲಕ್ಷದಲ್ಲಿ ಅನಾವರಣಗೊಳ್ಳದೆ ಹೋಗಿವೆ ; ಹೋಗುತ್ತಲಿವೆ.
ಜನಪದ ಸಂಸ್ಕೃತಿಯ ಪಳಿಯುಳಿಕೆಯೊಂದಿಗೆ ಗ್ರಾಮೀಣ ಸತ್ವ ಸಮೃದ್ಧಿಗಳನ್ನು ಮೈಗೂಡಿಸಿಕೊಂಡ ದೇಸಿ ಬದುಕಿನ ಸಾಧಕರು ಯಾವ ಪ್ರಚಾರ, ಪ್ರಸಾರ, ಪ್ರದರ್ಶನ, ಪ್ರಶಸ್ತಿಗಳನ್ನು ಬೆನ್ನು ಹತ್ತಿದವರಲ್ಲ ತಣ್ಣಗೆ ತಮ್ಮ ಗಟ್ಟಿ ಹೆಜ್ಜೆಗಳನ್ನು ಊರುತ್ತಾ ಮುನ್ನಡೆಯುತ್ತಾರೆ.
12ನೇ ಶತಮಾನದಿಂದಲೇ ಸಾಹಿತ್ಯದ ಜೀವ ದಾರಿಯಾಗಿ ಪ್ರವಹಿಸಿದ ಸ್ವರ ವಚನ ಕೀರ್ತನ ವಿನ್ಯಾಸ ಪಡೆದು ತತ್ವಪದವಾಗಿ ಅನುಭಾವಗೀತೆಯಾಗಿ 18ನೆಯ ಶತಮಾನದಲ್ಲಿ ಒಂದು ವಿಶಿಷ್ಟ ರೂಪ ಪಡೆಯಿತು ಹಾಗೂ ಜನಮನ್ನಣೆ ಗಳಿಸಿತು.
ರಕ್ಕಸ ಹಸಿವಿಗಾಗಿ ದುಡಿದು ಬೆವರು ಸುರಿಸುತ್ತಿದ್ದ ಬಸಪ್ಪನ ಊರಿನಲ್ಲಿ ನಾದದ ಗಂಧ ಕಂಪು ಸೂಸುತ್ತಿತ್ತು. ಒಂಬತ್ತು ಹತ್ತು ವರುಷದವರಿದ್ದಾಗಲೇ ಚೌಡಕಿ ಪದದ ಪುಂಗಿನಾದಕ್ಕೆ ತಲೆದೂಗಿದವರು ಹಿಮ್ಮೇಳದಲ್ಲಿ ಧ್ವನಿಗೂಡಿಸಿದವರು. ಚೌಡಕಿಯ ಬೆಳಗಿನ ನುಡಿತಕ್ಕೆ ತಮ್ಮನ್ನೇ ಮಾರಿಕೊಂಡವರು.
ಚೌಡಕಿ ಲಾವಣಿ ತತ್ವ ಅನುಭವ ಪದಗಳನ್ನು ಹಾಡುತ್ತಾ ಹಾಡುತ್ತಾ, ಲೌಕಿಕದ ದುಡಿಮೆ ಕಾಯಕದ ಆಚೆ ಏನೋ ಘನವಾದದು ಇದೆ ಎಂದು ಹಪಹಪಿಸಿದ ಬಸಪ್ಪ ಅವರು ಗುರುದೀಕ್ಷೆ ಪಡೆದು ಅನುಮಾನಗಳನ್ನು ಗುರುವಿನಲ್ಲಿ ಕೇಳಿ ತಿಳಿಯುತ್ತ ಅವರಿತ್ತ ಗ್ರಂಥಗಳನ್ನು ಓದುತ್ತಾ ಅನುಭಾವದ ಸಾಧನೆಯಲ್ಲಿ ಮುನ್ನಡೆದವರು.
ಮುಂದುವರೆಯುತ್ತದೆ ….

ದಿನಾಂಕ – 21/8/2026
ಮುನ್ನುಡಿ
ಪ್ರೋ ಚಂದ್ರೇಗೌಡ ಕುಲಕರ್ಣಿ ಸಾಹಿತಿಗಳು ತಾಳಿಕೋಟೆ

