ಹೇಗಿದೆ ಶಿವಣ್ಣನ ಬೇಲ್ ??
ರೇಟಿಂಗ್ : 4 / 5
ತಪ್ಪು ಮಾಡಿರುವ ಅಪರಾಧಿಗಳು, ದೇಶದ್ರೋಹದ ಕೆಲಸ ಮಾಡುವ ದುಷ್ಟರು, ಸಮಾಜದಲ್ಲಿ ಕೆಟ್ಟ ಕೆಲಸಗಳನ್ನು ಮಾಡಿ ರಾಜಾರೋಷವಾಗಿ ಓಡಾಡುವ ಹಣವಂತರು,ಹೆಣ್ಣು ಮಕ್ಕಳನ್ನ ವಸ್ತುಗಳ ಹಾಗೆ ಉಪಯೋಗಿಸಿ ಬಿಸಾಕುವ ಕಾಮುಕರು,
ತಾವು ಹಣವಂತರು ಸಿರಿವಂತರು ಎಂಬ ಸೊಕ್ಕು,ಅಹಂಕಾರದಿಂದ, ಅನ್ಯಾಯ ಅಕ್ರಮಗಳನ್ನು ಮಾಡಿ,ನ್ಯಾಯಾಲಯ ಎಂಬ ವ್ಯವಸ್ಥೆಯಿಂದ ಹಾಗೂ ಪೊಲೀಸ್ ವ್ಯವಸ್ಥೆಯಿಂದ ಪಾರಾಗಿ ಐಷಾರಾಮಿ ಲೈಫ್ ಸ್ಟೈಲ್ ನಲ್ಲಿರುವಂತಹ ಕಳ್ಳರು ಖದೀಮರನ್ನ ಏನು ಮಾಡಬೇಕು ??
ತಪ್ಪು / ಅಪರಾಧ ಮಾಡಿದ್ದರು ಸಹ,ಅದಕ್ಕೆ ಪೂರಕವಾದ ಎಲ್ಲ ಸಾಕ್ಷಿಗಳು ಇದ್ದರು ಸಹ,ತಮ್ಮ ಹಣ ಮತ್ತು ಅಧಿಕಾರದಿಂದಾಗಿ ಅಮಾಯಕರನ್ನು ಸುಮ್ಮನಾಗಿಸಿ,ದ್ವನಿ ಎತ್ತುವವರ ವಿರುದ್ಧ ಪಿತೂರಿ ಮಾಡುವ,ಎಲ್ಲ ದುಷ್ಟರಿಗೂ ನ್ಯಾಯಾಲಯದಿಂದ ಬೇಲ್ ಸಿಗುತ್ತದೆ,ಪೊಲೀಸ್ ವ್ಯವಸ್ಥೆ ಪರೋಕ್ಷವಾಗಿ ಸಹಾಯ ಮಾಡುತ್ತದೆ ಎನ್ನುವುದಾದರೆ ಇಂತವರಿಗೆ ಶಿಕ್ಷೆ ಆಗೋದು ಯಾವಾಗ,ಶಿಕ್ಷೆ ಕೊಡೋರು ಯಾರು,ಯಾರಾದರೂ ಇರಬೇಕಲ್ಲವೇ ??
ಮೇಲೆ ವಿವರಿಸಿದ ಕಠೋರ ಸತ್ಯದ ಮೇಲೆ ಬೆಳಕು ಚೆಲ್ಲುವ ಸಿನ್ಮಾ ಬೇಲ್,ಪವನ್ ಒಡೆಯರ್ ನಿರ್ದೇಶನದ,
ಕೆವಿಎನ್ ನಿರ್ಮಾಣದಲ್ಲಿ ಇಂದು ಬಿಡುಗಡೆಯಾದ ಬೇಲ್ ನಿಜಕ್ಕೂ ಪ್ರಸ್ತುತ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿರುವ ವಾಸ್ತವ ಸತ್ಯ ಎನ್ನಬಹುದು.
ತಪ್ಪು ಮಾಡಿರುವ ಕ್ರಿಮಿನಲ್ ಗಳನ್ನು,ಅಮಾಯಕ ಹೆಣ್ಣು ಮಕ್ಕಳಿಗೆ ದೈಹಿಕ ಹಿಂಸೆ ಕೊಡುವ ಕಾಮುಕರನ್ನ, ದೇಶದ್ರೋಹದ ಕೆಲಸಗಳನ್ನ ಮಾಡುವ ಭಯೋತ್ಪಾದಕರನ್ನ ಮತ್ತು ಬೇಲ್ ಪಡೆದು ಜೈಲಿನಿಂದ ಆಚೆ ಇರುವ, ಸಮಾಜಘಾತುಕ ಶಕ್ತಿಗಳನ್ನ ಹಾಗೂ ಸಮಾಜಕ್ಕೆ ಧಕ್ಕೆಯಾಗುವ ಶಕ್ತಿಗಳನ್ನ,ತಮ್ಮ ಪ್ರಾಪರ್ ಸಮಯ,ಪ್ರಾಪರ್ ಪ್ಲಾನಿಂಗ್ ಮೂಲಕ ಒಂಚೂರು ಯಾರಿಗೂ ಕೂಡ ಸಂಶಯ ಬರದ ರೀತಿಯಲ್ಲಿ,ಸಾಕ್ಷಿಗಳು ಸಿಗದ ರೀತಿಯಲ್ಲಿ ಸಾಯಿಸುತ್ತಾ ಬರುವ ಒಂದು ತಂಡ ಆ ತಂಡದಲ್ಲಿ ಒಟ್ಟು ಮೂರು ಸಿಂಹಗಳು,
ಇವರಿಗೆ ಸಪೋರ್ಟ್ ಮಾಡಲು,
ಸ್ಪೆಷಲ್ ಪಾತ್ರದಲ್ಲಿ ನಾಲ್ಕನೇ ಸಿಂಹ ಕೂಡ ಇದೇ,ಅದುವೇ ಲಿಲ್ಲಿ..
ಮೊದಲನೆಯವರು,ನಿವೃತ್ತ ಐಪಿಎಸ್ ಪೊಲೀಸ್ ಆಫೀಸರ್ ವಿಜಯ್ ( ಶಿವರಾಜಕುಮಾರ್ )
ಎರಡನೆಯವರು ನಿವೃತ್ತ ನ್ಯಾಯಾಧೀಶ ಅಲಿ (ಸಾಯಿಕುಮಾರ್)
ಮೂರನೇಯವರು ರಾಬರ್ಟ್ ಅಲಿಯಾಸ್ ರಾಬಿ (ಜಯರಾಮ್) ನಾಲ್ಕನೆಯವರು ವೆರಿ ಇಂಪಾರ್ಟೆಂಟ್ ಲಿಲ್ಲಿ ..?
ಲಿಲ್ಲಿ ಪಾತ್ರವನ್ನು ಮಾಡಿದ್ದು ಯಾರು ಅನ್ನೋದನ್ನ ನೀವು ಚಿತ್ರಮಂದಿರದಲ್ಲಿ ನೋಡಿ ಖುಷಿ ಪಡಿ.
ಅಲಿ ಕ್ರಿಮಿನಲ್ ಪ್ಲಾನ್ ಕೊಟ್ಟರೆ,ರಾಬಿ ಅದನ್ನ ಟೆಕ್ನಿಕಲಿ ಮೂವ್ ಮಾಡ್ತಾನೆ,ಫೈನಲಿ ವಿಜಯ್ ಅದಕ್ಕೊಂದು ಡೆಡ್ಲಿ ಕ್ಲೈಮಾಕ್ಸ್ ಕೊಡುತ್ತಾನೆ,ಎಲ್ಲದರಲ್ಲೂ ಲಿಲ್ಲಿ ಮಾಸ್ಟರ್ ಮೈಂಡ್.
ಇದರ ನಡುವೆ ಊರಿಗೆ ಊರನ್ನೇ ಬೆಂಕಿ ಹಚ್ಚಿ ನೂರಾರು ಜನರ, ಮಾರಣ ಹೋಮಕ್ಕೆ ಕಾರಣನಾದ ತನ್ನ ಸಹೋದರ ಯೋಗಿರೆಡ್ಡಿ ( ಲೂಸ್ ಮಾದ ಯೋಗಿ ) ಯನ್ನು ಪೊಲೀಸ್ ಮತ್ತು ನ್ಯಾಯಾಲಯದಿಂದ ಪಾರು ಮಾಡಲು ಹಣ ಚೆಲ್ಲುವ,ಮಾಜಿ ಮಂತ್ರಿ ನಾಗಾರೆಡ್ಡಿ ( ಗೋಪಾಲ್ ಕೃಷ್ಣ ದೇಶಪಾಂಡೆ ) ಯಾವುದೋ ಒಂದು ಚಿಕ್ಕ ಕೇಸ್ ಮೇಲೆ ಅಂದರ್ ಮಾಡಿ ಬೇಲ್ ಕೊಡಿಸಿ ಆಚೆ ತರೋಣ ಎನ್ನುವ ಸಮಯದಲ್ಲಿಯೇ,ಈ ಮೂರು ಸಿಂಹಗಳ ಇಂಪ್ಯಾಕ್ಟ್ ನಾಗಾರೆಡ್ಡಿಯ ಮೇಲೆ ಬೀಳುತ್ತದೆ, ನಾಗಾರೆಡ್ಡಿಯ ಸಹಾಯಕ್ಕೆ ಅಂತಾ ಒಂದು ದೊಡ್ಡ ಪತ್ರಿಕಾ ಸಂಸ್ಥೆಯ ಮುಖ್ಯಸ್ಥ ( ರಮೇಶ್ ಇಂದಿರಾ ) ಕೈ ಜೋಡಿಸುತ್ತಾನೆ,
ಅಂತೂ ಇಂತೂ ಯೋಗಿರೆಡ್ಡಿ ಬೇಲ್ ಮೇಲೆ ಆಚೆ ಬರುತ್ತಾನೆ.
ಯೋಗಿರೆಡ್ಡಿಯನ್ನು ಸಹ ಸಾಯಿಸಲು ಮಾಸ್ಟರ್ ಪ್ಲಾನ್ ಮಾಡಲು ಶುರು ಮಾಡುತ್ತದೆ,ವಿಜಯ್ ತಂಡ.
ಇದರ ನಡುವೆಯೇ ಮಗಳಂತೆ ಸಾಕಿ,ಮುದ್ದು ಮಾಡಿದ ನಯನಾಳ ( ಸಂಜನಾ ಆನಂದ್ ) ಪ್ರಿಯಕರ IPS ಅಧಿಕಾರಿ ದಯಾಶಂಕರ್ ( ದೀಕ್ಷಿತ್ ಶೆಟ್ಟಿ ) ಕೂಡಾ ಬೇಲ್ ಪಡೆದುಕೊಂಡವರು ಹೇಗೆ ಕೊಲೆಯಾಗುತ್ತಿದ್ದಾರೆ,ಕೊಲೆ ಮಾಡ್ತಾ ಇರೋದು ಯಾರು ಅನ್ನೋದನ್ನು ಪತ್ತೆ ಹಚ್ಚುವ ಪ್ರಯತ್ನ ಕೂಡಾ ಮಾಡ್ತಾ ಇರ್ತಾನೆ, ಈ ವಿಷ್ಯ ಮಾವ ವಿಜಯ್ ಗು ಗೊತ್ತಿರುತ್ತದೆ.
ಅಷ್ಟಕ್ಕೂ ವಯಸ್ಸಾದ ಈ ಮೂರು ಸಿಂಹಗಳು ಯಾಕೆ ಸರಣಿ ಕೊಲೆಗಳನ್ನ ಮಾಡುತ್ತವೆ,

ವಿಜಯ್,ರಾಬಿ,ಅಲಿ ಇವರ ಫ್ಲಾಶ್ ಬ್ಯಾಕ್ ಏನು ??
ಯಾಕೆ ಆ ಮೂರು ಜನ ಅಷ್ಟು ಕ್ರಿಮಿನಲ್ ಆಗಿ ಯೋಚನೆ / ಯೋಜನೆ ಮಾಡ್ತಾ ಇರ್ತಾರೆ ??
ಯೋಗಿರೆಡ್ಡಿ ಯಾಕೆ ಇಡೀ ಊರಿಗೆ ಬೆಂಕಿ ಹಾಕಿದ ??
ದಯಾಶಂಕರ್ ಮಾಡುವ ತನಿಖೆ ಹೇಗಿರತ್ತೆ ??
ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಬೇಲ್ ಕೊಡತ್ತೆ.
ಶಿವಣ್ಣ ಎಂದಿನಂತೆ ಸೂಪರ್ ಫಾಸ್ಟ್, ಏನ್ ಎನರ್ಜಿ ಗುರುವೇ, ಅಬ್ಬಬ್ಬ ಫ್ರೇಮ್ ಹೇಗೆ ಇಟ್ಟರು ಖಡಕ್,ವೆರಿ ಇಂಟೆನ್ಸ್ ಆದನಂತಹ ನಟನೆ, ಶಿವಣ್ಣ ಯು ಆರ್ ಲವ್ಲೀ,
ಶಿವಣ್ಣನ ಪತ್ನಿ ಪಾತ್ರದಲ್ಲಿ “ನಲ್ಲ” ಚಿತ್ರದ ಖ್ಯಾತಿಯ ಸಂಗೀತಾ ತುಂಬಾ ಸೊಗಸಾಗಿ,ಪಾದರಸದಂತೆ ಅಭಿನಯಿಸಿದ್ದಾರೆ,ಇನ್ನೂ ರಾಬಿಯಾಗಿ, ರೋಮ್ಯಾಂಟಿಕ್ ಬಾಯ್ ತರಹ ಇಡೀ ಸಿನ್ಮಾ ಪೂರ್ತಿ ಕಚಗುಳಿ ಇಡುತ್ತ ಚಿತ್ರಕ್ಕೊಂದು ತೂಕ ಹೆಚ್ಚಿಸಿದ ನಟ ಜಯರಾಮ್ ಸೂಪರ್,
ಹಾಗೆ ಅಲಿಯಾಗಿ ಸಾಯಿಕುಮಾರ್ ಅವರದು ಎಂದಿನಂತೆ ಮ್ಯಾಜಿಕಲ್ ಅಭಿನಯ,ಲೂಸ್ ಮಾದ ಯೋಗಿ ವೆರಿ ಇಂಪ್ರೆಸ್ಸಿವ್, ದೀಕ್ಷಿತ್ ಶೆಟ್ಟಿ,ಸಂಜನಾ ಆನಂದ್,ರಮೇಶ್ ಇಂದಿರಾ,ಗೋಪಾಲ್ ಕೃಷ್ಣ ದೇಶಪಾಂಡೆ,ಸುನಿಲ್ ಪುರಾಣಿಕ್,ಸಂಗೀತ ಅನಿಲ್,ರಮೇಶ್ ಭಟ್,ಅರುಣಾ ಬಾಲರಾಜ್ ಸೇರಿದಂತೆ ಎಲ್ಲ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಬೇಲ್ ಚಿತ್ರದ ಸಂಗೀತ ಚೆನ್ನಾಗಿದೆ,ಅದರಲ್ಲೂ ವಿಶೇಷವಾಗಿ ಹೇಳುವುದಾದರೆ,ಹಿನ್ನಲೆ ಸಂಗೀತ ಮಾತ್ರ ಬೆಂಕಿ, ಕ್ಯಾಮರಾ ಕೆಲಸ ಚೆನ್ನಾಗಿದೆ.
ಇಂಟೆನ್ಸ್ ಆದಂತಹ ಕಥೆ,ಕಥೆಗೆ ಅಷ್ಟೇ ಸಾಥ್ ಕೊಟ್ಟ ಚಿತ್ರಕಥೆ, ಚಿತ್ರಕಥೆಗೆ ತೂಕ ಬರುವಂತೆ ಮಾಡಿದ ಸಂಭಾಷಣೆ,ತುಂಬಾ ಕ್ಲೀನ್ ಆಂಡ್ ಸ್ಟಡಿ ಮಾಡಿ ಚಿತ್ರವಾಗಿಸಿದ ನಿರ್ದೇಶನ,
ಇಂತದೊಂದು ಸೆನ್ಸಿಬಲ್ ಇಂಟೆನ್ಸ್ ಕಥೆಯನ್ನ ಸಿನ್ಮಾವಾಗಿಸಿದ,ನಿರ್ದೇಶಕ ಪವನ್ ಒಡೆಯರ್ ಪ್ರಯತ್ನಕ್ಕೆ ಇಡೀ ಕರ್ನಾಟಕ ದೊಡ್ಡ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಬೇಕು.
ಇಂತದ್ದೊಂದು ಸದಭಿರುಚಿಯ,ಸಾಮಾಜಿಕ ಕಳಕಳಿಯ ಕಥೆಯನ್ನ ಒಪ್ಪಿಕೊಂಡು,ಚಿತ್ರ ನಿರ್ಮಾಣ ಮಾಡಿದ ಕೆವಿಎನ್ ಸಂಸ್ಥೆ ಮತ್ತು ನಿರ್ಮಾಪಕರಾದ ವೆಂಕಟ ನಾರಾಯಣ ಧೈರ್ಯಕ್ಕೆ ಮತ್ತೊಂದು ಮೆಚ್ಚುಗೆ ಇರಲಿ.
ತುಂಬಾ ಅಪರೂಪಕ್ಕೆ ಬರುವಂತಹ, ಅಪರೂಪಕ್ಕೆ
ಪ್ರಯತ್ನ ಪಡುವಂತಹ ಕಥೆ,ಬೇಲ್.
ಗ್ಯಾರಂಟಿ ಚಿತ್ರ ನಿಮಗೆ ಇಷ್ಟ ಆಗತ್ತೆ ಹಾಗೆ ಚಿತ್ರ ನೋಡುವಾಗ ನೀವು ಕೂಡಾ ಬೇಲ್ ಜತೆ ಕನೆಕ್ಟ್ ಆಗ್ತೀರಾ.
ಮಿಸ್ ಮಾಡದೆ ನೋಡಿ ಬೇಲ್
ರವೀ ಸಾಸನೂರ್
MasterNews365.Com

