ವೈವಾಹಿಕ ಜೀವನ – ( ಮುಂದುವರಿದ ಭಾಗ)
ಹುಸೇನಪ್ಪಾ ಬಿ ಎ ಮೊದಲ ವರ್ಷ ಅಧ್ಯಯನ ಮಾಡಿ ದೂರದ ಗೋವಾಕ್ಕೆ ದುಡಿದು ತಿನ್ನಲು ವಲಸೆ ಹೋಗುತ್ತಾನೆ. ನಂತರ ಸಾವಿತ್ರಿ ದೇವಿ ಎಂಬ ವಧವನ್ನು ಮದುವೆ ಮಾಡಿಕೊಂಡು ಗೋವಾದಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಗೂಡ್ಸ್ ಚಾಲಕನಾಗಿ ಸರಕು ಸಾಗಾಣಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ದುಡಿಮೆ ಮಾಡುತ್ತಾನೆ.
ಕಿರಿಯ ಚಿರಂಜೀವ ಪರಶುರಾಮ ಬಸಪ್ಪನವರ ಹಲವಾರು ಜೀವನದ ಸವಾಲುಗಳ ಮಧ್ಯೆ ಬಿ ಎ / ಬಿ ಇ ಡಿ ಪಾಸ್ ಮಾಡಿ ಜೊತೆಗೆ ಆಂಗ್ಲ ವಿಷಯದಲ್ಲಿ ಎಂ ಎ ಸ್ನಾತ್ತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪಡೆದುಕೊಂಡರು. ಈ ಮಧ್ಯೆ ಪ್ರತಿಭಾ ಎಂಬ ಯುವತಿಯ ಕೈಹಿಡಿದು ಜೀವನ ಸಂಗಾತಿಯನ್ನಾಗಿ ಮಾಡಿಕೊಂಡು ಬಾಳಬಂಡಿಯನ್ನು ಸಾಗಿಸುತ್ತಿರುವರು.
ಮದುವೆಯಾದ ಮೇಲೆ ಜೀವನೋಪಾಯಕ್ಕೆ ಏನಾದರೂ ಮಾಡಬೇಕೆಂದು ಚಿಂತಿಸುತ್ತಿರುವಾಗ ಎಸ್ ಡಿ ಆರ್ ಕಾಲೇಜು ಬಿದರಕು0ದಿಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಂದೆ ವೀರೇಶ್ವರ ಆರ್ಟ್ಸ್ ಹಾಗೂ ವಾಣಿಜ್ಯ ಕಾಲೇಜು ನಾಲತವಾಡದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಪಾಠ ಬೋಧನಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಜೊತೆಗೆ ತಮ್ಮ ತಂದೆ ತಾಯಿಯೊಂದಿಗೆ ಉತ್ತಮವಾದ ಸಂಸಾರಿಕ ಜೀವನವನ್ನು ಸಾಗಿಸತೊಡಗಿದರು. ಬಸಪ್ಪನವರು 80ರ ಹರೆಯದಲ್ಲೂ ಕೂಡ ನಿತ್ಯ ಪ್ರತಿ ತಮ್ಮ ಕಾರ್ಯಕ್ರಮ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.

ವೃತ್ತಿಜೀವನ –
ಬಸಪ್ಪನವರ ದೈನಿಕ ದಿನಾಚರಣೆ –
ಇವರ ಇಷ್ಟದೇವತೆ ಸವದತ್ತಿಯ ಎಲ್ಲಮ್ಮ ತಾಯಿ. ಊರಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಕಲಾತಂಡಗಳನ್ನು ಕರೆದುಕೊಂಡು ಮನೆ ಮನೆಗೆ ಹೋಗಿ ತತ್ವಪದಗಳನ್ನು ಹಾಡುವುದರ ಮೂಲಕ ದೇವಿಯ ಸೇವೆ ಸಲ್ಲಿಸುತ್ತಾ ಜೀವನದ ತೇರನ್ನು ಎಳೆಯಲು ಆರಂಭಿಸಿದರು. ಇವರ ಕಲಾತಂಡದ ಮೇಳದಲ್ಲಿ ಇರುವವರು ಎಂದರೆ –
ಬಸಪ್ಪ ಚೌಡಕೇರಿ ತಂಡದ ಮುಖ್ಯಸ್ಥರು
ಮಡಿವಾಳಪ್ಪ ಬಸಪ್ಪ ಚೌಡಕೇರ
ಪರಸಪ್ಪ ಯಲ್ಲಪ್ಪ ಚೌಡಕೇರ
ಹನುಮವ್ವ ಭೀಮಪ್ಪ ಚೌಡಕೇರ (ದೇವದಾಸಿ )
ಶಾಂತವ್ವ ರಾಮಪ್ಪ ಚೌಡಕೇರ (ದೇವದಾಸಿ )
ಬಸಪ್ಪನವರು ಬ್ಯಾಕೋಡ, ಸಾಲವಾಡಗಿ, ವನಹಳ್ಳಿ , ಲಿಂಗದಳ್ಳಿ, ಮೂಕಿಹಾಳ ,ದೇವರ ಹುಲಗಬಾಳ ,ಅಡವಿ , ಬ್ಯಾಕೋಡ , ಕುದುರೆ ಸಾಲವಾಡಗಿ, ಢವಳಗಿ ಹಾಗೂ ಮುದ್ದೇಬಿಹಾಳ ವಿಜಯಪುರ ಮುಂತಾದ ಕಡೆಗಳಲ್ಲಿ ಚೌಡಕಿ ಪದ ಹಾಗೂ ತತ್ವಪದಗಳನ್ನು ಹಾಡುತ್ತಾ 330 ಹಳ್ಳಿ ಗುರು ಮನೆ ಅಂತ ಕರೆಸಿಕೊಂಡವರು. ಚೌಡಕಿ ಸೇವೆಯನ್ನು ಮುಂದುವರೆಸಲು ದೇವಿ ಯಾರನ್ನಾದರೂ ಒಬ್ಬರನ್ನೂ ಹುಟ್ಟಿಸುತ್ತಾಳೆ ಎಂಬ ಭಾವನೆ ಹಾಗೂ ಬಲವಾದ ನಂಬಿಕೆ ಅವರದ್ದು.
ಇವರ ನಿತ್ಯ ಪ್ರಸಾದಕ್ಕೆ ಮೆಕ್ಕೆಜೋಳದ ನುಚ್ಚು ಅದು ಕೂಡ ಹೊಟ್ಟೆ ತುಂಬಾ ಸಿಗುತ್ತಿರಲಿಲ್ಲ. ಹೀಗಿದ್ದರೂ ಬಸಪ್ಪನವರು ತಂದೆಯ ಸ್ಥಾನದಲ್ಲಿದ್ದು ಎಲ್ಲವನ್ನು ಸಹಿಸಿಕೊಂಡು ಎಲ್ಲರನ್ನೂ ಸಹಿಸಿಕೊಂಡು ನಿಭಾಯಿಸಿದರು. ಮನೆಯಲ್ಲಿ ದನ -ಕರು, ಆಕಳು - ಆಡು ಕೂಡ ಇದ್ದವು. ಆದರೆ ಕೈ ಕೆಸರಾದರೆ ಬಾಯಿ ಮೊಸರು ಎಂದು ಅರಿತು ಹೈನುಂಡು ಶ್ರಮಿಸಿದವರು. ಇವರದ್ದು ಕೂಡು ಪರಿವಾರ 4 ಎಕರೆ ಜಮೀನು ಮೂಲತಃ ಇದ್ದು ಇವರ ತಂದೆಯವರು ತಮ್ಮ ಕೈ ಮೇಲೆ ಎರಡು ಎಕರೆ ತೋಟ ಖರೀದಿ ಮಾಡಿದ್ದರು. ಅದರಲ್ಲಿ ಶೇಂಗಾ, ಜೋಳ, ತೊಗರಿ, ಹತ್ತಿ , ಉಳ್ಳಿಗಡ್ಡೆ ಈ ಎಲ್ಲಾ ಮೂಲ ಬೆಳೆಗಳನ್ನು ಬೆಳೆಯುತ್ತಿದ್ದರು.
ಮುಂದುವರೆಯುತ್ತದೆ ….
H R ಬಾಗವಾನ ಲೇಖಕರು

