“ಮುಸುಕಿದ ವಿಷಯ ಪತಂಗ ಬಿದ್ದುರುಳೆ ತಾ
ಮಸಬುದ್ಧಿ ಎಂಬ ಕತ್ತಲೆಯಳಿಯೇ
ಮಸಗಿ ಸೂಜ್ಞಾನವಂತೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕ ಪೂರ್ದನುಪಮ “
ಹೀಗೆ ತತ್ವಪದ ಎನ್ನುವುದು ಆತ್ಮದೊಂದಿಗೆ ನಿರಂತರ ಸಂವಾದ ತಾಮಸ ಬುದ್ಧಿ ಅಳಿಸಿ ಸುಜ್ಞಾನದ ಪ್ರಭೆಯನ್ನು ವಿಸ್ತರಿಸುವ ಶಕ್ತಿ, ತತ್ವಪದಕಾರರು ಮೂಲತಃ ಅನುಭಾವಿಗಳು, ಧರ್ಮ ಜಿಜ್ಞಾಸುಗಳು ಹಾಗೂ ಧಾರ್ಮಿಕ ಸಾಹಿತ್ಯದಲ್ಲಿ ತೊಡಗಿದ ಕವಿಗೆ ಆಯಾ ಮತ ಧರ್ಮವನ್ನು ಕುರಿತು ಶ್ರದ್ಧೆ ಮುಖ್ಯವಾದರೆ ಅನುಭವ ಸಾಹಿತ್ಯದಲ್ಲಿ ಅದನ್ನು ಬರೆಯುವ ಅವನಿಗೆ ಕೇವಲ ಧರ್ಮ ಶ್ರದ್ಧೆ ಮಾತ್ರವಲ್ಲದೆ ಒಂದು ಬಗೆಯ ಆಧ್ಯಾತ್ಮಿಕ ನಿಲುವು ಮತ್ತು ಅವರೊಂದಿಗೆ ವೈಯಕ್ತಿಕವಾದ ಸಾಧನೆಯು ಮುಖ್ಯವಾಗಿರುತ್ತದೆ.
ಕವಿ ಇಲ್ಲಿ ಒಬ್ಬ ಸಾಧಕ. ಬಸವಣ್ಣ ,ನಿಜಗುಣರು, ಪುರಂದರದಾಸರು, ಅನುಭವ ಸಾಹಿತ್ಯ ನಿರ್ಮಿತಿಗೆ ಒಂದು ಬಗೆಯ ಸಾಧಕ ಮನೋಭಾವ ಆಧ್ಯಾತ್ಮಿಕ ಅನುಭವಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಹಂಬಲ ಅಗತ್ಯ. ಇಂತಹ ನೆಲೆಯಿಂದ ಬಂದವರು ವಚನಕಾರರು, ಹರಿದಾಸರು, ಹಾಗೂ ತತ್ವಪದಕಾರರು. ಅನುಭವ ಸಾಹಿತ್ಯ ಎನ್ನುವುದು ಭಕ್ತಿ ಸಾಹಿತ್ಯದೊಳಗಿನ ಒಂದು ಪ್ರಭೇದ ಅನುಭಾವ ಒಂದು ಮಾನಸಿಕ ನಿಲುವು.
ಅಲ್ಲಮಪ್ರಭು, ಅಕ್ಕಮಹಾದೇವಿಯವರ ಆಧ್ಯಾತ್ಮಿಕ ಪ್ರಭುತ್ವವನ್ನು ಎಲ್ಲ ಶಿವಶರಣರು ಒಪ್ಪಿಕೊಂಡಿದ್ದಾರೆ. ಶಿಶುವಿನಾಳ ಶರೀಫರು ಒಂದು ಅರ್ಥದಲ್ಲಿ ತತ್ವಪದಗಳ ರೂವಾರಿ ಅವರ ಪ್ರಕಾರ " ತತ್ವಪದ "ಎಂದರೆ ಜೀವನದಲ್ಲಿ ಮನುಷ್ಯ ಜೀವ ಮಾಡುವ ತಪ್ಪುಗಳನ್ನು ಯೋಚಿಸುವ ರೀತಿಯನ್ನು ಯಾವುದೋ ಒಂದು ಸನ್ನಿವೇಶಕ್ಕೆ ಹೋಲಿಸಿ ಹಾಡಿನಿಂದ ವಿವರಿಸುವುದು.
ಮುಂದುವರೆಯುತ್ತದೆ ….

