ಮಲಗೋದ ಪುರುಷೋತ್ತೇ ಇಲ್ಲ ನಿದ್ದೆ ಹತ್ತಿಬಿಡ್ತು, ನಿದ್ದೆಯೊಳಗೆ ಅವನಿಗೆ ಕನಸೊಂದು ಬಿತ್ತು . ಕನಸಿನಾಗ ಬೀಗರು ಬಂದ ಹಾಂಗ ಆತು. ಎಲ್ಲಾ ಮಾತುಕತೆ ಮುಗಿಯಿತು. ಮದುವೆನೂ ಆಯಿತು, ಹೆಣ್ಣಿನ ಕಡೆಯವರು ಕನ್ಯ ಧಾರೆ ಎರೆದು ಕೊಟ್ಟರು. ಸ್ವಲ್ಪ ದಿನ ಕಳೆಯುವುದರಾಗ ಅವರಿಗೆ ಒಬ್ಬ ಮಗನು ಹುಟ್ಟಿದ. ಒಂದು ದಿನ ಗಂಡ ಹೆಂಡತಿ ಇಬ್ಬರೂ ಮಲಗಿದ್ರು. ಮಗನ್ನ ನಡುವೆ ಹಾಕಿದ್ರು. ನಿದ್ದಿಗಣ್ಣಾಗ ಆ ಕಡೆ ಹೊಳ್ಳಿದ. ಹೆಂಡತಿ ಏನು ಅಂದ್ಲು ಅಂದ್ರೆ …
” ಏ …ಯಜಮಾನ ಹಾಕಿದ್ದಿ ಆಕಡೆ ಹೊಳ್ಳಿ ಮಲಗಿಕೊ” ಅಂದಳು.
ಅಂದವನೇ ಆ ಕಡೆ ಹೊರಳಿ ಬಿಟ್ಟ. ಮೊದಲೇ ಆಯಕಟ್ಟಿನ ಜಾಗ. ಆಯ ತಪ್ಪಿ ಧುಪ್ಪ ಎಂದು ಅಟ್ಟದಿಂದ ಕೆಳಗಡೆ ಬಿದ್ದು ಸೊಂಟವನ್ನೇ ಮುರಿದುಕೊಂಡ. ಬಿದ್ದ
ರಭಸಕ್ಕೆ ಕಣ್ಣು ಬಿಟ್ಟು ಎದ್ದು ನೋಡುತಾನ ಅಲ್ಲಿ ಹೆಂಡ್ತಿನೂ ಇಲ್ಲ, ಮಗನು ಇಲ್ಲ . ಆತ ಅಂದುಕೊಂಡ –
“ಅಲ್ಲ ನಾನು ಕೇವಲ ಹೆಂಡತಿಯ ಸ್ಮರಣೆ ಮಾಡಿಕೊಂಡ ನನ್ನ ಸೊಂಟ ಮುರಿತು ಖರೇನ ಮದುವೆ ಅಂತ ಮಾಡಿಕೊಂಡರು ನನ್ನ ಗತಿ ಏನಾದೀತು..?”
“ಅದಕ್ಕ ಕನಸಿನ ಸಂಸಾರ ಸಾಲಿಗೆ ಬಂದರ ನೆಚ್ಚಪ್ಪ ಪ್ರಪಂಚ ಅಂದ್ರೆ ಹೆಂಗದ… ಇದು ಒಂದು ಕನಸು. ಅದಕ್ಕೆ ಇದನ್ನು ನೆಚ್ಚಬಾರದು ಅಂತ ಹೇಳಿ ಪದ ಹಾಡಿದ್ದ . ಹಾಡು ಹಾಡಿ ಮುಗಿಸಿದರು. ಮಳೆ ಬಂದು ಹ್ಯಾಂಗ ನಿಂದರ್ತದೆ ಹಂಗ ಆತ. “
” ಇಷ್ಟು ಮಾಡಿ ಪೆಟಗಿ ಬಿಟ್ಟು ಕೆಳಗೆ ಇಳಿದು ಬಂದು ಕುಂತ. ಮುಂದೆ ಬ್ಯಾರೆದವರು ಬ್ಯಾರೆ ಪದ ತಗೊಂಡ್ರು. ಅವನು ಪದ ಮಣಿಯಲಿಲ್ಲ . ಅಲ್ಲಿ ಕುಂತವರು ನನಗ ಕೂಗಿ ಕರೆದರು . ಅವರು ಮೂಕಿಹಾಳದವರು ಮೇಲಾಗಿ ನಮ್ಮ ಬೀಗರು. ಅವರು ಪೆಟ್ಟಿಗೆ ಬಾರಸ್ಯಾಡ್ತಿದ್ದರು. ನನ್ನ ನೋಡಿ ಶರಣ್ರ ಬರ್ರಿ ಅಂತ ಕರೆದರು. ನನಗೆ ಆ ಹಾಡು ಕೇಳಿ ತುಂಬಾ ಆನಂದ ಆಗಿಬಿಟ್ಟಿತ್ತು. ಅವರು ಕರೆದರಂತ ನಾನು ಹೋದೆ. “
“ಶರಣರ .. ನಿಮಗ ಪದ ಬರ್ತಾವು, ಹಾಡ್ರಿ ಅಂದ್ರು . ಇವರು ಬಹಳ ಅನುಭವಿಗಳು ಅದಾರ. ಅವರು ಯಾವೂರವರು ಅಂತ ಕೇಳಿದೆ. “
“ಅವರು ಕನ್ನೊಳ್ಳಿಯವರು ಅಂದ್ರು. “
“ಕನ್ನೊಳ್ಳಿಯವರು… “
“ಇಂತಹ ಶರಣರು ಸಿಗುವುದು ತುಂಬಾ ಅಪರೂಪ ಎಂತಹ ಅನುಭವದ ಪದ ಹಾಡಿದರು. ಮುತ್ತು ಸುರಿದಾಂಗ ಆತ ಅಂದೆ. ” ಅದನ್ನು ಕೇಳಿ ಆ ಶರಣ
“ನಮಗ್ಯಾಕ್ರಿ….ನಮಗ್ಯಾಕ್ರಿ…. “ಅಂತ ಕುಂತಲ್ಲೇ ಕೈ ಮುಗಿಯಾಕ್ಕ ಹತ್ತಿದ.
“ವೇದಿಕೆ ಮೇಲೆ ನಿಂತು ನಾ ಪದ ಹಾಡಕ್ ಶುರು ಮಾಡಿದೆ. “
“ಅವರೇನು ಅಂದ್ರು ಪ್ರಪಂಚ ಅಂದ್ರೆ ಹೆಂಗೈತಿ ಪ್ರಪಂಚ ಮಾಡಬ್ಯಾಡ್ರಿ ಅಂದಾರ. ಆದರೆ ಪ್ರಪಂಚ ಮಾಡ್ರಿ ಪ್ರಪಂಚ ಏನೂ ಕೆಡಕು ಮಾಡಿಲ್ಲ. ಮತ್ತು ಪ್ರಪಂಚ ಹೆಂಗೆ ಮಾಡಬೇಕು ಅಂದ್ರೆ ನಿಜಗುಣರು ಹೇಳುತ್ತಾರ-“
ಮುಂದುವರೆಯುತ್ತದೆ . . . .
H R ಬಾಗವಾನ ಲೇಖಕರು

