ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ‘ಕಿಂಗ್’ ಚಿತ್ರದ ‘ತು ಮಿಲ್ ಜಾಯೆ’ ಹಾಡು ರಿಲೀಸ್; ದೀಪಿಕಾ ಜೊತೆ ರೊಮ್ಯಾನ್ಸ್, ಅರಿಜಿತ್-ಎಡ್ ಶೀರನ್ ಜುಗಲ್‌ಬಂದ…
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದು ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದ್ದಾರೆ. ಅವರ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಕಿಂಗ್’ ಚಿತ್ರದ ಮೊದಲ ಹಾಡು ‘ತು ಮಿಲ್ ಜಾಯೆ’ ಬಿಡುಗಡೆಯಾಗಿದ್ದು, ಸಂಗೀತ ಮತ್ತು ಸಿನಿಮಾ ಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ. ಜಾಗತಿಕ ಮಟ್ಟದ ಪ್ರತಿಭೆಗಳನ್ನು ಒಟ್ಟುಗೂಡಿಸಿರುವ ಈ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಮತ್ತೊಮ್ಮೆ ತಮ್ಮ ಅದ್ಭುತ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಮೂಲಕ ಕಮಾಲ್ ಮಾಡಿದೆ.
ಚಿತ್ರದ ಜಗತ್ತನ್ನು ಪರಿಚಯಿಸುವ ಈ ವಿಡಿಯೋ ಹಾಡು ಶಾರುಖ್ ಖಾನ್ ಅವರ ಖಡಕ್ ಡೈಲಾಗ್‌ನೊಂದಿಗೆ ಪ್ರಾರಂಭವಾಗುತ್ತದೆ. “ಮೈ ಖಾತಿಲ್ ನಹಿ, ಆಶಿಕ್ ಹೂಂ, ಔರ್ ನಿಶಾನಾ ಮೇರಿ ಮಶೂಕಾ, ಔರ್ ವೋಹ್ ಆಶಿಕ್ ಹಿ ಕ್ಯಾ ಜೋ ದಿಲ್ ಚೀರ್ ನಾ ದೇ” (ನಾನು ಕೊಲೆಗಾರನಲ್ಲ, ಪ್ರೇಮಿ; ನನ್ನ ಗುರಿ ನನ್ನ ಪ್ರೇಯಸಿ, ಎದೆ ಸೀಳದಿದ್ದರೆ ಅವನು ಪ್ರೇಮಿಯೇ ಅಲ್ಲ) ಎಂಬ ಮಾತುಗಳು ಅವರ ಪಾತ್ರದ ಗತ್ತು ಮತ್ತು ತೀವ್ರತೆಯನ್ನು ತೋರಿಸಿಕೊಟ್ಟಿವೆ. ನಂತರ ಆರಂಭವಾಗುವ ರೊಮ್ಯಾಂಟಿಕ್ ಟ್ರ್ಯಾಕ್‌ನಲ್ಲಿ ಬಾಲಿವುಡ್‌ನ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರ ಕಂಠಸಿರಿ ಮತ್ತು ಜಾಗತಿಕ ಪಾಪ್ ಸೆನ್ಸೇಷನ್ ಎಡ್ ಶೀರನ್ ಅವರ ವಿಶಿಷ್ಟ ರಾಪ್ ಶೈಲಿ ಅದ್ಭುತವಾಗಿ ಬೆಸೆದುಕೊಂಡಿದ್ದು, ಮಧುಬಂತಿ ಬಾಗ್ಚಿ ತಮ್ಮ ಧ್ವನಿಯ ಮೂಲಕ ವಿಶೇಷ ಮೆರುಗು ನೀಡಿದ್ದಾರೆ.
ರೊಮ್ಯಾನ್ಸ್, ಭರ್ಜರಿ ಆಕ್ಷನ್ ಮಿಶ್ರಣವಾಗಿರುವ ಈ ಹಾಡು ‘ಕಿಂಗ್’ ಚಿತ್ರದ ಒಳನೋಟವನ್ನು ತೆರೆದಿಡುತ್ತದೆ. ಸಚಿನ್-ಜಿಗರ್ ಸಂಗೀತ ಸಂಯೋಜನೆ, ಕುಮಾರ್ ಅವರ ಸಾಹಿತ್ಯ ಹಾಗೂ ಪಿಯೂಷ್-ಶಾಜಿಯಾ ಅವರ ನೃತ್ಯ ನಿರ್ದೇಶನ ಈ ಹಾಡಿಗಿದೆ. ಜೊತೆಗೆ ಎಡ್ ಶೀರನ್ ಬರೆದಿರುವ ಇಂಗ್ಲಿಷ್ ರಾಪ್ ಈ ದೇಸಿ-ವಿದೇಶಿ ಸಮ್ಮಿಲನವನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಹಾಡಿನ ಅಂತ್ಯದಲ್ಲಿ ಬರುವ ಶಾರುಖ್ ಅವರ ಮತ್ತೊಂದು ಪವರ್‌ಫುಲ್ ಸಂಭಾಷಣೆ ಇದೆ. “ಇಸ್ ಬಾರ್ ದಿಲ್ ಮೇಂ ಆಗ್ ಲಗೀ ಹೈ, ಅಬ್ ದುನಿಯಾ ಜಲಾಯೆ ಬಿನಾ ಮಾನೇಗಾ ನಹಿ” (ಈ ಬಾರಿ ಹೃದಯದಲ್ಲಿ ಬೆಂಕಿ ಬಿದ್ದಿದೆ, ಇನ್ನು ಈ ಜಗತ್ತನ್ನು ಸುಡದೆ ಇದು ಸುಮ್ಮನಿರಲ್ಲ) ಎಂಬ ಡೈಲಾಗ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ರೋಮಾಂಚಕ ಜೋಡಿ ತೆರೆಮೇಲೆ ತಂದಿರುವ ಮ್ಯಾಜಿಕ್, ಹಾಡಿನ ಅದ್ಧೂರಿ ದೃಶ್ಯಾವಳಿಗಳು ಹಾಗೂ ಚುರುಕಾದ ಆಕ್ಷನ್ ಟ್ರಾನ್ಸಿಷನ್‌ಗಳು ಚಿತ್ರದ ಭವ್ಯತೆಯನ್ನು ಸಾಕ್ಷೀಕರಿಸುತ್ತವೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದು, 2026ರ ಡಿಸೆಂಬರ್ 24ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದ್ಯ ‘ತು ಮಿಲ್ ಜಾಯೆ’ ಹಾಡು ಎಲ್ಲಾ ಪ್ರಮುಖ ಆಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಝೀ ಮ್ಯೂಸಿಕ್ ಕಂಪನಿ ಮತ್ತು ಟಿ-ಸೀರೀಸ್ ಯೂಟ್ಯೂಬ್ ಚಾನೆಲ್‌ಗಳಲ್ಲಿ ವೀಕ್ಷಣೆಗೆ ಲಭ್ಯವಿದೆ.

