ಪತ್ರಿಕಾ ಪ್ರಕಟಣೆಗಾಗಿ
ಪ್ರಶಸ್ತಿ ಮತ್ತು ಸಹಾಯಧನದ ಹೆಸರಲ್ಲಿ ಕನ್ನಡ ಸಿನೆಮಾ ನಿರ್ಮಾಪಕರ ಮೇಲಿನ ಶೋಷಣೆ ನಿಲ್ಲಲಿ.
2022 ಹಾಗೂ 2023 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಘೋಷಣೆ ಆಗಿದ್ದು, ಇದೇ ಅಕ್ಟೋಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಪ್ರಶಸ್ತಿ ಹಾಗೂ ಸಹಾಯಧನ ನೀಡುವ ಪ್ರಕ್ರಿಯೆಗಳು ತಡವಾಗುತ್ತಿರುವುದರಿಂದ, ಅರ್ಜಿ ಸಲ್ಲಿಸಲು ನಿರ್ಮಾಪಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟೇ. ಉಳಿದಂತೆ ಬಹುತೇಕ ನಿರ್ಮಾಣ ಸಂಸ್ಥೆಗಳು ಸ್ವತಂತ್ರ ಹಾಗೂ ಅರೆಕಾಲಿಕ, ಅಂದರೆ ಒಂದು ಅಥವಾ ಎರಡು ಸಿನೆಮಾಗಳು ಮಾಡಿ ತಮ್ಮ ಕಚೇರಿಯನ್ನು ಮುಚ್ಚಿರುತ್ತಾರೆ. ಸಿನೆಮಾ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ ಪತ್ರಗಳನ್ನು ಬಹುತೇಕರು ವ್ಯವಸ್ಥಿವಾಗಿ ತಮ್ಮ ಬಳಿ ಇರಿಸಿಕೊಂಡಿರುವುದಿಲ್ಲ. ಸಿನೆಮಾಗೆ ಕೆಲಸ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಣ ವ್ಯವಸ್ಥಾಪಕರಾಧಿಯಾಗಿ ಇಡೀ ತಂಡ, ಸಿನೆಮಾ ಬಿಡುಗಡೆ ಆದನಂತರ ಬೇರೆ ಬೇರೆ ಕೆಲಸಗಳಿಗೆ ಹೊರಟು ಬಿಡುತ್ತಾರೆ. ಇಲ್ಲಿಯವರೆಗೂ ಸಿನೆಮಾ ನಿರ್ಮಾಣಕ್ಕೆ ಬಂದಿರುವ ಇತ್ತೀಚಿನ ಬಹುತೇಕ ನಿರ್ಮಾಪಕರಿಗೆ ಈ ಪತ್ರ ವ್ಯವಹಾರಗಳ ಬಗ್ಗೆ ಬಹುತೇಕ ಮಾಹಿತಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸರ್ಕಾರ ಹೀಗೆ ತಡವಾಗಿ ಅರ್ಜಿ ಆಹ್ವಾನಿಸಿದಾಗ, ಪ್ರತಿಯೊಂದು ಪತ್ರವನ್ನು ಸಂಗ್ರಹಿಸಲು ನಿರ್ಮಾಪಕರು ಪಡುವ ಕಷ್ಟ ಅಷ್ಟಿಷ್ಟಲ್ಲ. ಸರ್ಕಾರ ಪ್ರಶಸ್ತಿ/ಸಹಾಯಧನ ಘೋಷಣೆ ಆದಮೇಲೆ ಬರುವ ವಿವಾದಗಳಿಂದ ಮುಕ್ತವಾಗಿರಲು, ಅರ್ಜಿ ನಮೂನೆಯನ್ನು ಏಳು ಸುತ್ತಿನ ಕೋಟೆಯಂತೆ ಸಿದ್ಧಪಡಿಸಿದೆ, ಅದರ ಜೊತೆಗೆ ಕೆಲವೊಂದು ನಮೂನೆಗಳ ಪ್ರತೀ ಅರ್ಜಿಯನ್ನು ಪ್ರಶಸ್ತಿ/ಸಹಾಯಧನ ಎರಡಕ್ಕೂ ಪ್ರತ್ಯೇಕವಾಗಿ ಹತ್ತು ಹತ್ತು ಪ್ರತಿಗಳನ್ನು ಕೇಳಿದೆ, ರಾಷ್ಟ್ರಪ್ರಶಸ್ತಿಗೆ ಅರ್ಜಿ ಸಲ್ಲಿಸುವಾಗ ಇಲ್ಲದ ಈ ಹತ್ತು ಹತ್ತು ಪ್ರತಿಗಳು ರಾಜ್ಯಸರ್ಕಾರದ ಅರ್ಜಿಯಲ್ಲಿ ಏಕೆ ಇರಬೇಕು ಎನ್ನುವುದಕ್ಕೇ ಸಕಾರಣವಂತೂ ಸಿಗುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ಕನ್ನಡ ಸಿನೆಮಾ ನಿರ್ಮಾಪಕರು ಬಸವಳಿಯುತ್ತಿರುವುದು ಬ್ಲೂರೇ ಡಿಸ್ಕ್ ಸಿದ್ಧಪಡಿಸುವುದಕ್ಕೆ.
ಹತ್ತು ವರ್ಷಗಳ ಹಿಂದೆ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆಯದ ಸಂದರ್ಭದಲ್ಲಿ ಸಿನೆಮಾದ ಫುಲ್ ಪಾರ್ಮೆಟ್ 2ಕೆ ರೆಸ್ಯುಲ್ಯೂಶನ್ ಅಲ್ಲಿ ಸಿನೆಮಾ ವೀಕ್ಷಣೆ ಮಾಡಲು ಇದ್ದ ಉತ್ತಮ ಮಾದರಿ ಬ್ಲೂರೇ ಆಗಿತ್ತು. ಆದರೆ ಇಂದು ಡಿವಿಡಿ-ಬ್ಲೂರೇ ಬಹುತೇಕ ಮಾರುಕಟ್ಟೆಯಿಂದ ಮರೆಯಾಗುತ್ತಿದೆ. ಮುಖ್ಯವಾಗಿ “ಉತ್ತಮ ಗುಣಮಟ್ಟದ” ಐದು ಬ್ಲೂರೇ ಖಾಲಿ ಡಿಸ್ಕ್ ಆನ್ಲೈನ್ ಅಲ್ಲಿ ಕನಿಷ್ಟ ಒಂದು ಸಾವಿರದಿಂದ ನಾಲ್ಕು ಸಾವಿರದವರೆಗೆ ಇದೆ, ಅರ್ಜಿಯಲ್ಲಿ ಪ್ರಶಸ್ತಿಗೆ ಹಾಗೂ ಸಹಾಯಧನಕ್ಕೆ ಪ್ರತ್ಯೇಕವಾಗಿ ಎರೆಡೆರೆಡು ಬ್ಲೂರೇ ಡಿಸ್ಕ್ ಅನ್ನು ಕೇಳಿದ್ದಾರೆ. ಈಗ ಬೆಂಗಳೂರಿನಲ್ಲಿ ಬ್ಲೂರೇ ಡಿಸ್ಕ್ ಅಲ್ಲಿ ಸಿನೆಮಾ ರೈಟ್ ಮಾಡಲು ಇರುವವರು ಕೇವಲ ನಾಲ್ಕೈದು ಮಂದಿ ಮಾತ್ರ. ಇವರ ಬಳಿ ಒಂದು ಬ್ಲೂರೇ ಡಿಸ್ಕ್ ಸಿದ್ಧಪಡಿಸಲು ಕನಿಷ್ಠ ಎರೆಡು ಸಾವಿರದಿಂದ ನಾಲ್ಕು ಸಾವಿರದವರೆಗೆ ಖರ್ಚಾಗುತ್ತದೆ. ಒಟ್ಟಾರೆ ನಾಲ್ಕು ಡಿಸ್ಕ್ ಗಳಿಗೆ ಎಂಟರಿಂದ ಹದಿನಾರು ಸಾವಿರ. ಇದರ ಬದಲು ಸರಳವಾಗಿ ಪಾಕೆಟ್ ಹಾರ್ಡ್ ಡಿಸ್ಕ್ ಅಲ್ಲಿ ಸಿನೆಮ ಕೊಡಲು ಐದು ಸಾವಿರ ಸಾಕು. ಸಿನೆಮಾದ ಸುರಕ್ಷತೆ ಮತ್ತು ವೀಕ್ಷಣೆಯ ಗುಣಮಟ್ಟ ಕಾಪಾಡಿಕೊಳ್ಳಲು ಡಿಸಿಪಿ ಫಾರ್ಮೆಟ್ ಇದೆ. ಜೊತೆಗೆ ಎಂಓವಿ ಕೂಡ 2ಕೆ ರೆಸುಲ್ಯೂಷನ್ ಅಲ್ಲಿ ಕೊಡಬಹುದು. ಇಷ್ಟು ಸರಳವಾದ ಮಾರ್ಗ ಬಿಟ್ಟು ಹತ್ತುವರ್ಷಗಳ ಹಿಂದಿನ ಬ್ಲೂರೇನೇ ಏಕೆ ಬೇಕು ಎನ್ನುವುದಕ್ಕೂ ಸಕಾರಣ ಸಿಗುತ್ತಿಲ್ಲ. ಈ ಹಿಂದೆ ರಾಷ್ಟ್ರ ಪ್ರಶಸ್ತಿ, ಪನೋರಮಾ, ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಪುಣೆಯ ಫಿಲಮ್ ಆರ್ಕೈವ್ ಗೆ ಬ್ಲೂರೇ ಕೇಳುತ್ತಿದ್ದರು. ಈಗ ಅಲ್ಲಿ ಎಲ್ಲವೂ ಪಾಕೆಟ್ ಹಾರ್ಡ್ ಡ್ರೈವ್ ಗೆ ಬದಲಾಗಿದ್ದಾರೆ. ಆದರೆ ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಮಾತ್ರ ಇನ್ನೂ ಅಲ್ಲೇ ಹತ್ತು ವರ್ಷ ಹಿಂದೆ ಉಳಿದಿದೆ.
ಇಷ್ಟೆಲ್ಲ ಕಷ್ಟಪಟ್ಟು ಸಿದ್ಧಪಡಿಸಿ ಕೊಟ್ಟರೂ ಬ್ಲೂರೇ ವಾರ್ತಾ ಇಲಾಖೆಯ ಬಳಿ ಸುರಕ್ಷಿತವಾಗಿ ಇರುತ್ತದೆ ಎಂಬ ಗ್ಯಾರಂಟಿ ಇಲ್ಲ. ಯಾಕೆಂದರೆ, ಈ ಹಿಂದೆ ನಮ್ಮ ಆಕ್ಟ್-1978 ಸಿನೆಮಾದ ಅರ್ಜಿ ಮತ್ತು ಬ್ಲೂರೇ ನಾನೆ ಸ್ವತಃ ಹೋಗಿ ಅವರಿಗೆ ನೀಡಿದ್ದರೂ, ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿ ಸಿನೆಮಾ ವೀಕ್ಷಿಸಿದ ದಿನ ಬ್ಲೂರೇ ಸಮಸ್ಯೆ ಆಗಿದೆ ಎಂದು ಪೆನ್ ಡ್ರೈವ್ ಅಲ್ಲಿ ಸಿನೆಮಾ ತರಿಸಿಕೊಂಡು ವೀಕ್ಷಿಸಿದ್ದಾರೆ. ಒಂದು ಪೆನ್ ಡ್ರೈವ್ ಅಥವಾ ಪಾಕೆಟ್ ಹಾರ್ಡ್ ಡಿಸ್ಕ್ ಅಲ್ಲಿ ಮುಗಿಯುವ ಕೆಲಸಕ್ಕೆ ಬ್ಲೂರೇ ನೇ ಯಾಕೆ ಬೇಕು. ಕಂಟೆಂಟ್ ಸುರಕ್ಷತೆಯ ದೃಷ್ಟಿಯಲ್ಲಿ ನೋಡಿದರೂ ಓಪನ್ ಡಿಸಿಪಿ ಫಾರ್ಮೆಟ್ ಸಾಕಲ್ಲವೇ?
ಎರಡು ವರ್ಷಕ್ಕೊಮ್ಮೆ ಅರ್ಜಿಶುಲ್ಕ ಪರಿಷ್ಕರಿಸಬಹುದು ಎಂಬ ಬೈಲಾದ ಆಧಾರದ ಮೇಲೆ 2022 ನೇ ವರ್ಷದ ಕನ್ನಡ ಸಿನೆಮಾಗಳಿಗೆ 16,193/- 2023ನೇ ವರ್ಷದ ಕನ್ನಡ ಸಿನೆಮಾಗಳಿಗೆ 18,621/- ರೂಪಾಯಿಗಳನ್ನು ಪ್ರಶಸ್ತಿ/ಸಹಾಯಧನಕ್ಕೆ ಪ್ರತ್ಯೇಕವಾಗಿ ನಿಗಧಿ ಮಾಡಿರುವ ಸರ್ಕಾರ , ಪ್ರಶಸ್ತಿ/ಸಹಾಯಧನ ಎರಡಕ್ಕೂ ಅರ್ಜಿ ಸಲ್ಲಿಸಬೇಕೆಂದರೆ, ಅರ್ಜಿಶುಲ್ಕ ಹಾಗೂ ಈ ಬ್ಲೂರೇ ಡಿಸ್ಕ್ ಹಾಗೂ ಹತ್ತು ಹತ್ತು ಪ್ರತಿಗಳು ಎಂದು ಒಟ್ಟಾರೆ ಒಂದು ಸಿನೆಮಾಗೆ ಅರ್ಜಿ ಸಲ್ಲಿಸಲು ಹೆಚ್ಚೂ ಕಡಿಮೆ 50-60 ಸಾವಿರ ರೂಪಾಯಿಗಳನ್ನು ಸರ್ಕಾರ ಬಡ ನಿರ್ಮಾಪಕರಿಂದ ಖರ್ಚು ಮಾಡಿಸುತ್ತಿರುವುದು ಶೋಷಣೆ ಅಲ್ಲದೇ ಮತ್ತೇನು? ಕೊರೋನಾ ನಂತರ ಸಿನೆಮಾದ ಮೇಲೆ ಹಣ ಹೂಡಿದ ಬಹುತೇಕ ನಿರ್ಮಾಪಕರು ನಷ್ಟವನ್ನು ಅನುಭವಿಸಿದ್ದಾರೆ, ಈ ಪ್ರಶಸ್ತಿ ಹಾಗೂ ಸಹಾಯಧನದ ಮೂಲಕ ಸ್ವಲ್ಪವಾದರೂ ನಷ್ಟ ತುಂಬಿಸಿಕೊಳ್ಳಬಹುದು ಎಂದು ನಿರೀಕ್ಷಿಸುವ ನಿರ್ಮಾಪಕರನ್ನು ಸರ್ಕಾರ ಈ ರೀತಿ ಶೋಷಿಸುವ ಬದಲು ಅರ್ಜಿ ನಮೂನೆಯನ್ನು ಸರಳವಾಗಿಸುವ ನಿಟ್ಟಿನಲ್ಲಿ ಸರ್ಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಲೇ ಸರ್ಕಾರದ ಬಳಿ ಮಾತನಾಡಿ ಪರಿಹಾರ ಸಿಗುವಂತೆ ಮಾಡಬೇಕೆಂದು, ಸಿನೆಮಾರಂಗದ ಪರವಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ.
ಮಂಸೋರೆ
ಸಿನೆಮಾ ನಿರ್ದೇಶಕ

