ಕನ್ನಡ Zee5ನಲ್ಲಿ ಮತ್ತೆ ತೆರೆದುಕೊಳ್ಳಲಿದೆ ‘ಅಯ್ಯನ ಮನೆ’ಯ ನಿಗೂಢ ಲೋಕ: ಅಕ್ಟೋಬರ್ 23ರಿಂದ ಎರಡನೇ ಸೀಸನ್ ಪ್ರಸಾರ.
ಕನ್ನಡ ಜೀ5 (Zee5) ಓಟಿಟಿ ವೇದಿಕೆಯು ತನ್ನ ಬಹುನಿರೀಕ್ಷಿತ ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ಯ ಎರಡನೇ ಸೀಸನ್ ಅನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ರಮೇಶ್ ಇಂದಿರಾ ಅವರ ನಿರ್ದೇಶನ ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಹೊಸ ಸರಣಿಯು ಒಟ್ಟು 6 ಕಂತುಗಳಲ್ಲಿ ಮೂಡಿಬರಲಿದೆ. ಮೊದಲ ಸೀಸನ್ನ ರೋಚಕ ಅಂತ್ಯದಿಂದ ಪ್ರೇಕ್ಷಕರಲ್ಲಿ ಹುಟ್ಟಿಕೊಂಡಿದ್ದ ಕುತೂಹಲಕ್ಕೆ ಈ ಹೊಸ ಅಧ್ಯಾಯವು ಮತ್ತಷ್ಟು ರೋಮಾಂಚಕ ತಿರುವುಗಳನ್ನು ನೀಡಲಿದ್ದು, ಖುಷಿ ರವಿ ಮತ್ತು ಅಕ್ಷಯ್ ನಾಯಕ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮಹಾಲಯ ಅಮಾವಾಸ್ಯೆಯ ಕರಾಳ ಮತ್ತು ನಿಗೂಢ ಹಿನ್ನೆಲೆಯಲ್ಲಿ ಈ ಸೀಸನ್ನ ಕಥೆ ತೆರೆದುಕೊಳ್ಳುತ್ತದೆ. ಶತಮಾನಗಳಷ್ಟು ಹಳೆಯದಾದ ಪೂರ್ವಜರ ಮನೆಯಲ್ಲಿ ನಡೆದ ನಾಗಲಾಂಬಿಕೆಯ ನಿಗೂಢ ಸಾವಿನ ಮರುಪ್ರಶ್ನೆಯು ಇಡೀ ಕುಟುಂಬದ ನೆಮ್ಮದಿಯನ್ನು ಕದಡುತ್ತದೆ. ಪೂರ್ಣಿಯ ಗೊಂದಲಮಯ ದರ್ಶನಗಳು ಮತ್ತು ಕುಟುಂಬದಲ್ಲಿ ಹೆಚ್ಚುತ್ತಿರುವ ಪರಸ್ಪರ ಅನುಮಾನಗಳು ಕೊನೆಗೆ ಜಾಜಿಯನ್ನೇ ಸಂಘರ್ಷದ ಕೇಂದ್ರಬಿಂದುವನ್ನಾಗಿ ಮಾಡುತ್ತವೆ. ಈ ಮಧ್ಯೆ ಜಾಜಿಯ ಗರ್ಭಧಾರಣೆಯು ಕುಟುಂಬಕ್ಕೆ ಕ್ಷಣಕಾಲ ಆಶಾಕಿರಣವಾದರೂ, ಆ ಮನೆಯಲ್ಲಿ ಹುದುಗಿರುವ ಹಳೆಯ ರಹಸ್ಯಗಳು, ಬದಲಾಗುವ ನಿಷ್ಠೆಗಳು ಹಾಗೂ ದುರುದ್ದೇಶಗಳು ಸಂಬಂಧಗಳನ್ನು ಛಿದ್ರಗೊಳಿಸುವ ಹಂತಕ್ಕೆ ತಲುಪಿಸುತ್ತವೆ. ಅಲೌಕಿಕ ವಿದ್ಯಮಾನಗಳು ಮತ್ತು ಕೌಟುಂಬಿಕ ಸಸ್ಪೆನ್ಸ್ನ ಜುಗಲ್ಬಂದಿಯಲ್ಲಿ ಮೂಡಿಬಂದಿರುವ ಈ ಕಥೆಯು, ಸತ್ಯ ಮತ್ತು ಭ್ರಮೆಗಳ ನಡುವಿನ ವ್ಯತ್ಯಾಸ ತಿಳಿಯದೆ ಕಂಗಾಲಾಗುವ ಕುಟುಂಬದ ತಲ್ಲಣವನ್ನು ತೆರೆದಿಡುತ್ತದೆ.
ಈ ಎರಡನೇ ಸೀಸನ್ ಕುರಿತು ಮಾತನಾಡಿರುವ ಜೀ ಕನ್ನಡ ಮತ್ತು ಜೀ ಪವರ್ ಮುಖ್ಯ ವಾಹಿನಿ ಅಧಿಕಾರಿ ಹಾಗೂ ಕನ್ನಡ ಜೀ5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, “ಸ್ಥಳೀಯ ಸಂಸ್ಕೃತಿಯ ಬೇರುಗಳೊಂದಿಗೆ ಬೆಸೆದುಕೊಂಡಿರುವ ಮತ್ತು ಭಾವನಾತ್ಮಕವಾಗಿ ಎಲ್ಲರನ್ನೂ ತಲುಪುವ ವಿಶಿಷ್ಟ ಕಥೆಗಳನ್ನು ನೀಡಲು ಸಂಸ್ಥೆ ಬದ್ಧವಾಗಿದೆ. ‘ಅಯ್ಯನ ಮನೆ’ಯ ಮೊದಲ ಸೀಸನ್ ತನ್ನ ಕೌಟುಂಬಿಕ ಭಾವನೆ, ನಿಗೂಢತೆ ಹಾಗೂ ಅಲೌಕಿಕ ಅಂಶಗಳಿಂದ ಪ್ರೇಕ್ಷಕರ ಮನಗೆದ್ದಿತ್ತು. ಈ ಬಾರಿ ಆ ಅನುಭವವನ್ನು ಇನ್ನಷ್ಟು ತೀವ್ರವಾಗಿ ಕಟ್ಟಿಕೊಡಲಾಗಿದ್ದು, ಪ್ರತಿಯೊಂದು ರಹಸ್ಯವೂ ಪಾತ್ರಗಳ ಬಗೆಗಿನ ನೋಡುಗರ ಗ್ರಹಿಕೆಯನ್ನೇ ಪರೀಕ್ಷಿಸಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಈ ಸೀಸನ್ನಲ್ಲಿ ಜಾಜಿಯ ಪಾತ್ರವು ಅತ್ಯಂತ ಸವಾಲಿನದ್ದಾಗಿದೆ ಎಂದಿದ್ದಾರೆ. ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಆಕೆ ತನ್ನೊಳಗಿನ ಅಗಾಧ ಶಕ್ತಿಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಒಬ್ಬ ಪತ್ನಿ ಮತ್ತು ತಾಯಿಯಾಗಿ ಆಕೆಯ ಆಂತರಿಕ ಹೋರಾಟ, ಭಯವನ್ನು ಮೆಟ್ಟಿ ನಿಲ್ಲುವ ಧೈರ್ಯ ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಹತ್ತಿರವಾಗಲಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ದುಷ್ಯಂತ್ ಪಾತ್ರಧಾರಿ ಅಕ್ಷಯ್ ನಾಯಕ್ ಮಾತನಾಡಿ, ಕುಟುಂಬದ ಮೇಲಿನ ಪ್ರೀತಿ, ಜವಾಬ್ದಾರಿ ಹಾಗೂ ಸತ್ಯದ ಹುಡುಕಾಟದ ನಡುವೆ ಸಿಲುಕಿ ಒದ್ದಾಡುವ ನಾಯಕನ ಆಂತರಿಕ ತೊಳಲಾಟ ಮತ್ತು ಅಸಹಾಯಕ ಮುಖವನ್ನು ಪ್ರೇಕ್ಷಕರು ಈ ಆರು ಕಂತುಗಳಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ” ಎಂದಿದ್ದಾರೆ ನಟಿ ಖುಷಿ ರವಿ.
ಪೂರ್ವಜರ ಮನೆಯಲ್ಲಿ ಮನೆಮಾಡಿರುವ ಕರಾಳ ಕತ್ತಲೆಯಿಂದ ಜಾಜಿ ತನ್ನವರನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎಂಬ ರೋಚಕ ಕಥಾಹಂದರ ಹೊಂದಿರುವ ‘ಅಯ್ಯನ ಮನೆ 2’ ಸರಣಿಯು ಅಕ್ಟೋಬರ್ 23 ರಿಂದ ಕನ್ನಡ ಜೀ5 ನಲ್ಲಿ ಅಧಿಕೃತವಾಗಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಜೀ5 ವೇದಿಕೆ ಬಗ್ಗೆ..ಜೀ5 ಭಾರತದ ಅತಿದೊಡ್ಡ ಸ್ವದೇಶಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಆಗಿದ್ದು, ಜಗತ್ತಿನ 190ಕ್ಕೂ ಹೆಚ್ಚು ದೇಶಗಳ ವೀಕ್ಷಕರಿಗೆ ದಕ್ಷಿಣ ಏಷ್ಯಾದ ಕಂಟೆಂಟ್ಗಳನ್ನು ತಲುಪಿಸುವ ಜಾಗತಿಕ ವೇದಿಕೆಯಾಗಿದೆ. ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ನ ಡಿಜಿಟಲ್ ಮನರಂಜನಾ ತಾಣವಾಗಿರುವ ಜೀ5, ಪ್ರಾದೇಶಿಕ ಭಾಷೆಗಳಿಗೆ ಮೊದಲ ಆದ್ಯತೆ ನೀಡುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದು ಹೈಪರ್-ಲೋಕಲ್ ಕಂಟೆಂಟ್ಗಳು, ಭಾಷಾವಾರು ಪ್ಯಾಕ್ಗಳು ಹಾಗೂ ಹಿಂದಿ, ತಮಿಳು, ತೆಲುಗು, ಬೆಂಗಾಲಿ, ಮಲಯಾಳಂ, ಕನ್ನಡ ಮತ್ತು ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ಅತ್ಯಂತ ಆಪ್ತವಾದ ವೀಕ್ಷಣಾ ಅನುಭವವನ್ನು ಒದಗಿಸುತ್ತದೆ.

ಒರಿಜಿನಲ್ಸ್, ಭಾರತೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರಗಳು, ಟಿವಿ ಶೋಗಳು, ಲೈವ್ ಸ್ಪೋರ್ಟ್ಸ್, ಮಕ್ಕಳ ಕಂಟೆಂಟ್, ಸುದ್ದಿ, ಲೈವ್ ಟಿವಿ ಮತ್ತು ಮೈಕ್ರೋ ಡ್ರಾಮಾಗಳ ಬೃಹತ್ ಸಂಗ್ರಹವನ್ನು ಹೊಂದಿರುವ ಜೀ5, ಎಲ್ಲೆಡೆಯ ಭಾರತೀಯರಿಗೆ ವೈವಿಧ್ಯಮಯ, ಬಹುಭಾಷಾ ಮನರಂಜನೆ ಹಾಗೂ ನೇರ ಕ್ರೀಡಾಕೂಟಗಳ ಅನುಭವ ನೀಡುವ ನೆಚ್ಚಿನ ತಾಣವಾಗಿದೆ. ಇದರ ಜೊತೆಗೆ, ಫೀಫಾ (FIFA) ಜೊತೆಗಿನ ಜೀ ಎಂಟರ್ಟೈನ್ಮೆಂಟ್ನ 2034ರವರೆಗಿನ ದೀರ್ಘಾವಧಿ ಪಾಲುದಾರಿಕೆಯ ಅಡಿಯಲ್ಲಿ, ಫೀಫಾ ವಿಶ್ವಕಪ್ 2026 ಮತ್ತು 2030 ಸೇರಿದಂತೆ ಪ್ರಮುಖ ಫುಟ್ಬಾಲ್ ಪಂದ್ಯಾವಳಿಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಅಧಿಕೃತ ವೇದಿಕೆಯೂ ಇದಾಗಿದೆ.
