ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ ಕನ್ನಡ ಚಿತ್ರರಂಗದ ಪಾಲ್ಗೊಳ್ಳುವಿಕೆ .
ಈ ಬಾರಿ ದಸರಾಗೆ ತಾರಾ ಮೆರಗು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಮಾಹಿತಿ .
ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ದಸರಾದಲ್ಲಿ ಇಡೀ ಕನ್ನಡ ಚಿತ್ರರಂಗವೇ ಭಾಗವಹಿಸಲಿದೆ. ಈ ಕುರಿತು ಮಾಹಿತಿ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ||ಜಯಮಾಲ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಎಂ.ಜಿ.ರಾಮಮೂರ್ತಿ, ಕನ್ನಡಪರ ಹೋರಾಟಗಾರರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ ರಾ ಗೋವಿಂದು, ಹಿರಿಯ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಸುಂದರರಾಜ್ ಹಾಗೂ ಕೆ.ಮಂಜು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎ.ಗಣೇಶ್, ಹಿರಿಯ ನಟ ದೊಡ್ಡಣ್ಣ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ|ಜಯಮಾಲ, ಈ ಬಾರಿ ದಸರಾದಲ್ಲಿ ಕಲಾವಿದರು ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲರು ಭಾಗವಹಿಸುತ್ತಿದ್ದೇವೆ. ದಸರಾ ರಂಗು ತರುತ್ತಿದೆ. ಇದೇ ಮೊಟ್ಟಮೊದಲ ಬಾರಿಗೆ ಈ ಸಂಭ್ರಮ ನಡೆಯುತ್ತಿದೆ. ಎಲ್ ಇ ಡಿ ಯಲ್ಲಿ ಚಿತ್ರರಂಗ ನಡೆದು ಬಂದ ಹಾದಿಯನ್ನು ತೋರಿಸಲಾಗುತ್ತದೆ. ಎರಡು ಬಸ್ ಗಳು ಸಹ ಇರುತ್ತದೆ. ಎರಡು ದಿನಗಳ ಕಾಲ ಚಿತ್ರೀಕರಣ ಸಹ ಇರುವುದಿಲ್ಲ. ರಾಕ್ಲೈನ್ ವೆಂಕಟೇಶ್ ಅವರಿಗೆ ಈ ಜವಾಬ್ದಾರಿಗಳನ್ನು ವಹಿಸಲಾಗಿದೆ. ಎಲ್ಲಾ ವ್ಯವಸ್ಥೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಡಲಿದೆ. ಕನ್ನಡ ಚಿತ್ರರಂಗದ ಎಲ್ಲರ ಪರವಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದರು.
416 ನೇ ದಸರಾ. ಈ ಬಾರಿ ಅಂಬಾರಿ ಬಸ್ ನಲ್ಲಿ ಕಲಾವಿದರಿಗೆ ಅರಮನೆ ವೀಕ್ಷಣೆ. ಅರಮನೆಯಲ್ಲಿ 150 ಕಲಾವಿದರಿಗೆ ಆಸನ ವ್ಯವಸ್ಥೆ. ಅರಮನೆ ಮುಂಭಾಗದಲ್ಲೂ ಕಲಾವಿದರಿಗೆ ಕುಳಿತುಕೊಳ್ಳಲು ವ್ಯವಸ್ಥೆ. ಕಲಾವಿದರ ಭದ್ರತೆಗೆ ಹೆಚ್ಚಿನ ವ್ಯವಸ್ಥೆ. ಹದಿನೈದು ಲಕ್ಷ ಜನರು ಸೇರುವ ನಿರೀಕ್ಷೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಟ್ಟೆಚ್ಚರ. 45 ವರ್ಷಗಳಿಂದ ನಡೆಯುತ್ತಿದ್ದ ಚಲನಚಿತ್ರೋತ್ಸವ ಈ ಬಾರಿ ಇರುವುದಿಲ್ಲ. ಅದರ ಬದಲು ಕಲಾವಿದರಿಗೆ ಸಹಾಯಧನ ನೀಡಲು ಸಲಹೆ. ಅನಂತನಾಗ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ಆಶಯ ಸಹ ಇದ್ದು, ಮುಂದಿನ ದಿನಗಳಲ್ಲಿ ಮಾತುಕತೆ ನಡೆಸುತ್ತೇವೆ ಎಂದು ಸಾ ರಾ ಗೋವಿಂದು ತಿಳಿಸಿದರು.
ರಾಕ್ಲೈನ್ ವೆಂಕಟೇಶ್ ಅವರು ಮಾತನಾಡಿ, ದಸರಾ ಸಂಭ್ರಮಕ್ಕೆ ಚಿತ್ರರಂಗಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಚಿತ್ರರಂಗದ ಎಲ್ಲರೂ ದಸರಾಗೆ ಬರಬೇಕು ಎಂದು ಮುಖ್ಯಮಂತ್ರಿಗಳು ಆಹ್ವಾನಿಸಿದ್ದಾರೆ. ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜಯಮಾಲ ಅವರೆ ಕರೆ ಮಾಡಿ ಆಹ್ವಾನಿಸುತ್ತಿದ್ದಾರೆ. ಈ ಬಾರಿ ದಸರಾ, ಚಿತ್ರರಂಗಕ್ಕೂ ಹಬ್ಬದ ಸಂಭ್ರಮ. ಚಿತ್ರರಂಗಕ್ಕೆ ಇಷ್ಟು ಮಹತ್ವ ಹಿಂದೆ ಸಿಕ್ಕಿರಲಿಲ್ಲ. ಸರ್ಕಾರ ಚಿತ್ರರಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಎಂಬ ಮಾತಿದೆ. ಹಾಗೆನಿಲ್ಲ. ನಾವೆಲ್ಲಾ ಒಗ್ಗಟ್ಟಾಗಿಯೇ ಇದ್ದೇವೆ. ದಸರಾ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ತಾರೆಯರ ಸಮಾಗಮವಾಗಲಿದೆ. ಚಿತ್ರರಂಗದ ಹಿರಿಯ ಕಿರಿಯ ಕಲಾವಿದರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

