ಪೀಠಿಕೆ –
ತತ್ವಪದಕಾರರು ನಮ್ಮ ನಾಡಿನ ಬಹುದೊಡ್ಡ ಆಸ್ತಿಯಾಗಿದ್ದು ಅವರು ಬರೆದ ಪದಗಳು ಬದುಕಿನ ದಾರಿ ದೀಪಗಳಾಗಿ ಜನರ ಬಾಳನ್ನು ಬೆಳಗಿವೆ. ಅವರು ಎಲೆಮರೆಯ ಕಾಯಿಯಂತಿದ್ದು ಗುರು ಶಿಷ್ಯ ಪರಂಪರೆಯ ಜೀವಂತ ಉದಾಹರಣೆಗಳಾಗಿದ್ದಾರೆ. ತತ್ವ ಬೋಧಕರೂ , ಹಿತಚಿಂತಕರು ಆಗಿದ್ದಾರೆ.
ಅವರಿಗೆ ಯಾವುದೇ ಧರ್ಮದ ಜಾತಿಯ ಭಾಷೆಯ ಗಡಿಗಳಿಲ್ಲ ಅವರದ್ದು ಜಾತಿ ಧರ್ಮದ ಎಲ್ಲೆಯನ್ನು ದಾಟಿದ ವಿಶ್ವಮಾನವ ಪ್ರಜ್ಞೆ ಅಂತಹ ಪ್ರಜ್ಞೆಯನ್ನು ನಾವು ನೀವೆಲ್ಲ ಬೆಳೆಸುವ ಅಗತ್ಯವಿದೆ.
ತತ್ವಪದಕಾರರು ತಮ್ಮ ಆರಾಧ್ಯ ದೈವ ಅಥವಾ ಸುತ್ತಲಿನ ಸ್ಥಳೀಯ ಗುರುವಿನ ಮುಖಾಂತರ ದೀಕ್ಷೆ ಪಡೆದು ಇಲ್ಲವೇ ಅವರ ಶಿಷ್ಯರಾಗಿ ತತ್ವಪದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ.
ಈ ತತ್ವಪದಕಾರರಿಗೆ ಸಮಾಜದಲ್ಲಿರುವ ವಿವಿಧ ವರ್ಗಗಳ ದೈವಗಳ ಮೇಲೆ ದ್ವೇಷವಾಗಲಿ, ವಿರೋಧವಾಗಲಿ ಕಂಡುಬರುವುದಿಲ್ಲ. ತಮ್ಮ ಅನುಭವದಿಂದ ಮೇಲು-ಕೀಳುಗಳ ನಡುವೆ ಬೆಳೆದಿರುವ ಮೌಢ್ಯತೆಯನ್ನು ಬಯಲಿಗೆ ಹಾಕುವ ನೆಲೆಯಲ್ಲಿ ಅವರು ತಮ್ಮ ವಿಚಾರವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ನಮ್ಮ ಸಮಾಜದಲ್ಲಿ ದಲಿತ ತತ್ವಪದಕಾರರನ್ನು ತೃತೀಯ ಜಗತ್ತಿನ ತತ್ವಪದಕಾರರು ಎಂಬುದಾಗಿ ಗುರುತಿಸಲಾಗಿದೆ. ಇವರು ಸಮಾಜದಲ್ಲಿ ಅತ್ಯಂತ ತಿರಸ್ಕಾರಕ್ಕೆ ಒಳಗಾಗಿರುವ ಕಾರಣ ಇವರನ್ನು ತೃತೀಯ ಜಗತ್ತಿನ ತತ್ವಪದಕಾರರು ಎಂದು ಕರೆಯಲಾಗಿದೆ.
ಶಿವಯೋಗಿ ಸಾಧು ಸಂತ ಮೌಲ್ವಿ, ಮುಲ್ಲಾಗಳಾದಿಯಾಗಿಯೂ ಸಾಮಾನ್ಯ ಸಂಸಾರಿಗಳು ಕೂಡ ಈ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಬಹುದು. ಅನುಭವದ ಅರಿವಿನಲ್ಲಿ ತತ್ವಪದಗಳನ್ನು ಬರೆದ ನಿಜಗುಣ ಶಿವಯೋಗಿಗಳಾಗಲಿ ಅಥವಾ ಇನ್ನಾವುದೇ ತತ್ವಪದಕಾರರಾಗಲಿ, ಧರ್ಮ, ಧಾರ್ಮಿಕ ಚಿಂತನೆ ವ್ಯಸನವಲ್ಲ ಅದಕ್ಕೆ ಮಿತಿ ಇಲ್ಲ ಅದು ಆತ್ಮವನ್ನು ಅರಿಯುವ ಅನಂತತೆಯ ದಾರಿ. ಅವರೇ ಹೇಳುವಂತೆ -
“ಮುಸುಕಿದ ವಿಷಯ ಪತಂಗ ಬಿದ್ದುರುಳೆ ತಾ
ಮಸಬುದ್ಧಿ ಎಂಬ ಕತ್ತಲೆಯಳಿಯೇ
ಮಸಗಿ ಸೂಜ್ಞಾನವಂತೆಂಬ ಮಹಾಪ್ರಭೆ
ಪಸರಿಸಿ ಮಾಯಾಕಾಳಿಕ ಪೂರ್ದನುಪಮ “
ಮುಂದುವರಿಯುತ್ತದೆ ….
………………………………………..

