‘ಪ್ರೇಮದ ಊರಲಿ’ ಚಿತ್ರಕ್ಕೆ ಭರ್ಜರಿ ಗೆಲುವು; ವೇದಿಕೆಯಲ್ಲಿ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದ ಚಿತ್ರತಂಡ!
ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಅಪಾರ ಪ್ರೀತಿ ಗಳಿಸಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಸಕ್ಸಸ್ ಮೀಟ್ ಸಂಭ್ರಮದಿಂದ ಜರುಗಿತು. ಚಿತ್ರದ ನಾಯಕ ಶ್ರೀರಾಮ್, ನಿರ್ದೇಶಕ ಮನೋಜ್ ಕುಮಾರ್, ಹಿರಿಯ ನಟ ರಂಗಾಯಣ ರಘು ಹಾಗೂ ನಾಯಕಿಯರಾದ ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಸೇರಿದಂತೆ ಇಡೀ ಚಿತ್ರತಂಡ ಮಾಧ್ಯಮಗಳ ಮುಂದೆ ಹಾಜರಾಗಿ ಗೆಲುವಿನ ಸಂಭ್ರಮ ಹಾಗೂ ಭಾವನಾತ್ಮಕ ಅನುಭವಗಳನ್ನು ಹಂಚಿಕೊಂಡಿತು.
ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಗೆ ಕೃತಜ್ಞತೆ ಸಲ್ಲಿಸಿದ ನಾಯಕ ನಟ ಶ್ರೀರಾಮ್, “ಈ ಚಿತ್ರಕ್ಕಾಗಿ ಸತತ ಮೂರು ವರ್ಷಗಳ ಸಮಯ ಕೊಟ್ಟಾಗ, ಸ್ನೇಹಿತರು ಪ್ಯಾನ್ ಇಂಡಿಯಾ ಅಥವಾ ದೊಡ್ಡ ಬಜೆಟ್ ಸಿನಿಮಾವಾ ಅಂತ ಕೇಳ್ತಿದ್ರು. ಆದರೆ ನಾನು ನಂಬಿದ್ದು ಕಥೆ ಹಾಗೂ ಈ ಅದ್ಭುತ ತಂಡವನ್ನು ಮಾತ್ರ. ಇಂದು ನವರಂಗ್, ಪ್ರಸನ್ನ, ಕಾಮಾಕ್ಯ ಥಿಯೇಟರ್ಗಳಲ್ಲಿ ಜನ ನಮ್ಮನ್ನು ಎತ್ತಿ ಮೆರೆಸುತ್ತಿದ್ದಾರೆ. ಕ್ಯೂನಲ್ಲಿ ನಿಂತು ಟಿಕೆಟ್ ತಗೊಳ್ತಿದ್ದ ಹುಡುಗನಿಗೆ ಈ ಪ್ರೀತಿ ನೋಡಿ ಕಣ್ಣೀರು ಬರ್ತಿದೆ. ಇದು ನಿರ್ದೇಶಕ ಮನೋಜ್ ಅವರ 18 ವರ್ಷಗಳ ತಪಸ್ಸಿನ ಫಲ. ಜೊತೆಗೆ ನಿರ್ಮಾಪಕ ದೇವೇಂದ್ರ ಸರ್ ಮನೆ ಮನೆಗೆ ಪೇಪರ್ ಹಾಕಿ ಜೀವನ ಕಟ್ಟಿಕೊಂಡವರು. ಅಂತಹ ಸಾಮಾನ್ಯ ವ್ಯಕ್ತಿಯೊಬ್ಬರು ಇಂದು ಗಾಂಧಿನಗರಕ್ಕೆ ಇಂಥ ದೊಡ್ಡ ಬ್ಲಾಕ್ಬಸ್ಟರ್ ಕೊಟ್ಟಿದ್ದಾರೆ. ಬುಕ್ಮೈಶೋನಲ್ಲಿ ಆಗ್ತಿರೋ ರೆಕಾರ್ಡ್ ಕಲೆಕ್ಷನ್ ನೋಡಿದರೆ ಇದು ಕನಸೋ ನನಸೋ ತಿಳಿಯುತ್ತಿಲ್ಲ. ಈ ಗೆಲುವು ನಮ್ಮದಲ್ಲ, ಇಡೀ ನಾಡಿನ ಜನತೆಯದ್ದು” ಎಂದು ಭಾವುಕರಾದರು.
ವೇದಿಕೆಯಲ್ಲೇ ಇಡೀ ತಂಡದೊಂದಿಗೆ ಎದ್ದು ನಿಂತು ಪ್ರೇಕ್ಷಕರಿಗೆ ಕೈಮುಗಿದು ನಮಸ್ಕರಿಸಿದ ಹಿರಿಯ ನಟ ರಂಗಾಯಣ ರಘು, “ಕನ್ನಡ ಪ್ರೇಕ್ಷಕ ಮಹಾಪ್ರಭುಗಳು ನೀಡಿದ ಈ ಪ್ರೀತಿಯನ್ನು ನಾವು ಯಾವತ್ತೂ ಮರೆಯಲ್ಲ. ನೀವು ಸಣ್ಣ ಸಿನಿಮಾಗಳನ್ನೂ ಗೆಲ್ಲಿಸಿದ್ದೀರಿ, ದೊಡ್ಡ ಸಿನಿಮಾಗಳನ್ನೂ ಮೆರೆಸಿದ್ದೀರಿ. ಭೂಮಿಯ ಮೇಲೆ ಕೇವಲ ಶ್ರೀಗಂಧದ ಮರಗಳಷ್ಟೇ ಇದ್ದರೆ ಸಾಲದು; ಕೊತ್ತಂಬರಿ ಸೊಪ್ಪು, ಬೆಂಡೆಕಾಯಿಯಂತಹ ಸಣ್ಣ ಬೆಳೆಗಳೂ ಬದುಕಬೇಕು. ಅದನ್ನೇ ನಮ್ಮ ಕನ್ನಡಿಗರು ಸಾಬೀತು ಮಾಡಿದ್ದಾರೆ. ಹೊಸಬರ ಈ ಸಣ್ಣ ಪ್ರಯತ್ನವನ್ನು ಹೃದಯತುಂಬಿ ಹರಸಿರುವ ಪ್ರೇಕ್ಷಕರ ಋಣ ಯಾವತ್ತಿಗೂ ತೀರದು” ಎಂದರು.
ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, “ನನಗೆ ಪ್ರಶಸ್ತಿ ಬಂದು ಮೂರು ವರ್ಷಗಳಾಗಿದ್ದರೂ ಸಿನಿಮಾ ಮಾಡಲು ಕಷ್ಟಪಡುತ್ತಿದ್ದೆ. ರಂಗಾಯಣ ರಘು ಸರ್ ಬಳಿ ಕಥೆ ಹೇಳಿದಾಗ, ‘ಕಥೆ ಅದ್ಭುತವಾಗಿದೆ ಕಣೋ, ಪೇಮೆಂಟ್ ಚಿಂತೆ ಬಿಡು, ಸಿನಿಮಾ ಶುರು ಮಾಡು’ ಎಂದು ಬೆಂಬಲಿಸಿದರು. ನಮ್ಮಂತಹ ಹೊಸಬರ ಚಿತ್ರ ಪ್ರೇಕ್ಷಕರಿಗೆ ತಲುಪಲು ರಘು ಸರ್ ಅವರಂತಹ ದೊಡ್ಡ ಕಲಾವಿದರ ಹೆಗಲು ಬೇಕಿತ್ತು. ಅವರು ತೋರಿದ ನಂಬಿಕೆಯನ್ನು ಇಂದು ಪ್ರೇಕ್ಷಕರು ಉಳಿಸಿಕೊಟ್ಟಿದ್ದಾರೆ” ಎಂದು ಸ್ಮರಿಸಿದರು.

ನಟಿ ರಮಿಕಾ ಶಿವು ಮಾತನಾಡಿ, “ನನ್ನ ತಂದೆ ನಟನೆಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಮನೋಜ್ ಸರ್ ನೀಡಿದ ಈ ಅವಕಾಶ ನನ್ನ ಬದುಕನ್ನೇ ಬದಲಿಸಿದೆ” ಎಂದು ಕೃತಜ್ಞತೆ ಅರ್ಪಿಸಿದರು. ಮತ್ತೊಬ್ಬ ನಟಿ ತಪಸ್ವಿನಿ ಪೂಣಚ್ಚ ಮಾತನಾಡಿ, “ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರಂಗಾಯಣ ರಘು ಸರ್ ಜೊತೆಗಿನ ದೃಶ್ಯವನ್ನು ಥಿಯೇಟರ್ನಲ್ಲಿ ನೋಡಿದಾಗಲೆಲ್ಲ ಕಣ್ಣೀರು ಬರುತ್ತದೆ. ಅವರೊಂದಿಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆಯಿದೆ” ಎಂದು ತಮ್ಮ ಅನುಭವ ಹಂಚಿಕೊಂಡರು.

